ADVERTISEMENT

ಕಾಂಗ್ರೆಸ್ ರಾಜ್ಯಗಳೇಕೆ ಮೊದಲು ಲಾಕ್‌ಡೌನ್ ವಿಸ್ತರಿಸಿದ್ದು?: ರಾಹುಲ್‌ಗೆ ಬಿಜೆಪಿ

ರಾಹುಲ್ ಗಾಂಧಿಗೆ ತಿರುಗೇಟು

ಏಜೆನ್ಸೀಸ್
Published 16 ಏಪ್ರಿಲ್ 2020, 11:19 IST
Last Updated 16 ಏಪ್ರಿಲ್ 2020, 11:19 IST
ಬಿ.ಎಲ್.ಸಂತೋಷ್ ಮತ್ತು ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ಬಿ.ಎಲ್.ಸಂತೋಷ್ ಮತ್ತು ರಾಹುಲ್ ಗಾಂಧಿ (ಸಂಗ್ರಹ ಚಿತ್ರ)   

ನವದೆಹಲಿ: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಾಕ್‌ಡೌನ್ ಪರಿಹಾರವಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ರಾಹುಲ್ ಗಾಂಧಿಯವರ ಪ್ರಕಾರ ಲಾಕ್‌ಡೌನ್ ಪರಿಹಾರವಲ್ಲ. ಹಾಗಿದ್ದರೆ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೇಕೆ ಮೊದಲು ಲಾಕ್‌ಡೌನ್ ವಿಸ್ತರಣೆ ಮಾಡಿದರು’ ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಮತ್ತು ಪಂಜಾಬ್‌ ಸರ್ಕಾರಗಳು ಕಳೆದ ವಾರವೇ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ 21 ದಿನಗಳ ಲಾಕ್‌ಡೌನ್ ಮುಗಿಯುವುದಕ್ಕೂ ಮುನ್ನವೇ ಈ ರಾಜ್ಯಗಳು ಅವಧಿ ವಿಸ್ತರಿಸುವ ನಿರ್ಧಾರ ಕೈಗೊಂಡಿದ್ದವು.

ADVERTISEMENT

‘ಏಪ್ರಿಲ್ 15ರ ರಾತ್ರಿ 9 ಗಂಟೆ ವರೆಗೆ ದೇಶದಲ್ಲಿ 2,74,599 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 5,000 ಮತ್ತು 10,000 ಪ್ರಕರಣಗಳ ಮಾನದಂಡಗಳಲ್ಲಿ ಕ್ರಮವಾಗಿ 114,015 ಮತ್ತು 217,554 ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಹಂತಗಳಲ್ಲಿ ಇಷ್ಟೊಂದು ಪ್ರಮಾಣದ ಪರೀಕ್ಷೆಯು ಅತ್ಯಂತ ದೊಡ್ಡದಾಗಿದೆ. ಅಮೆರಿಕ, ಬ್ರಿಟನ್‌ ಮತ್ತು ಇಟಲಿಯಲ್ಲಿ ನಡೆಸಿದ್ದಕ್ಕಿಂತಲೂ ದೊಡ್ಡದಾಗಿದೆ’ ಬಿಜೆಪಿ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.

ವಿಡಿಯೊ ಆಪ್ ಮೂಲಕ ಇಂದು ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ‘ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಾಕ್‌ಡೌನ್ ಪರಿಹಾರವಲ್ಲ. ನಿರ್ಬಂಧಗಳು ಸೋಂಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಬಹುದು ಅಷ್ಟೇ. ಸರ್ಕಾರ ಟೆಸ್ಟಿಂಗ್ ಪ್ರಮಾಣವನ್ನು ಯೋಜಿತ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.