ADVERTISEMENT

ಪಟೇಲ್‌ ಹೆಸರಲ್ಲಿ ಬಿಜೆಪಿ ವಂಚನೆ: ಸಿಪಿಐ ಮುಖಂಡ ಡಿ.ರಾಜಾ ಆರೋಪ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 19:45 IST
Last Updated 27 ಡಿಸೆಂಬರ್ 2019, 19:45 IST
   

ಬೆಂಗಳೂರು:ಪೌರತ್ವವನ್ನುಧರ್ಮದೊಂದಿಗೆಸಂಪರ್ಕಿಸಕೂಡದು ಎಂದುಸಂವಿಧಾನರಚನಾಸಭೆಯಲ್ಲೇ ತಿಳಿಸಲಾಗಿತ್ತು. ಸರ್ದಾರ್ ಪಟೇಲ್‌ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ಸರ್ಕಾರ ಇದನ್ನು ಗಾಳಿಗೆ ತೂರಿ ಪಟೇಲ್‌ ಹಸರಿಗೇ ಕಳಂಕ ತರುತ್ತಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಆರೋಪಿಸಿದರು.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮ ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯ ಕುರಿತು ಸಹ ಪಟೇಲ್‌ ಸಮ್ಮುಖದಲ್ಲೇ ಚರ್ಚೆ ನಡೆದಿತ್ತು. ಎಲ್ಲರೂ ಸಮ್ಮತಿ ಸೂಚಿಸಿದ ಕಾರಣಕ್ಕೇ ಡಾ.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಅದನ್ನು ಸೇರಿಸಿದ್ದರು. ಆದರೆ ಈ ಇತಿಹಾಸವನ್ನೂ ಮರೆಮಾಚಿ ಜನರಿಗೆ ಸುಳ್ಳು ಹೇಳುವ ಕೆಲಸವನ್ನು ಆರ್‌ಎಸ್‌ಎಸ್‌ ಪ್ರಭಾವಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.

‘ಆರ್‌ಎಸ್‌ಎಸ್‌ ಸಂವಿಧಾನೇತರ, ಚುನಾಯಿತ ಪಕ್ಷ ಹೊರತಾದ ರಾಜಕೀಯ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಹಿಂದುತ್ವ ರಾಷ್ಟ್ರ ಮಾಡುವುದೇ ಅದರ ಕಾರ್ಯಸೂಚಿ. ಮೋದಿ ಸರ್ಕಾರ ಅದನ್ನು ಕಾರ್ಯಗತಗೊಳಿಸುತ್ತಿದೆ, ಆರ್‌ಎಸ್‌ಎಸ್‌–ಬಿಜೆಪಿಗಳಿಂದ ದೇಶದ ಸಂವಿಧಾನದ ಅಘೋಷಿತ ದಮನ ನಡೆಯುತ್ತಿದೆ’ ಎಂದರು.

ADVERTISEMENT

ರಾಷ್ಟ್ರವ್ಯಾಪಿ ಆಂದೋಲನ: ಸಿಎಎ, ಎನ್‌ಆರ್‌ಸಿ ವಿರುದ್ಧ ಸಿಪಿಐ ಸಹಿತ ವಿವಿಧ ಸಮಾನ ಮನಸ್ಕ ಪಕ್ಷಗಳಿಂದ ಜನವರಿ 1ರಿಂದ 7ರವರೆಗೆ ರಾಷ್ಟ್ರದಾದ್ಯಂತ ಆಂದೋಲನ ನಡೆಯಲಿದೆ. ಜನವರಿ8ರಂದು ಮುಷ್ಕರ ನಡೆಸುವ ವಿಚಾರ ಇದೆ ಎಂದರು.

ಕಚೇರಿ ಮೇಲಿನ ದಾಳಿಗೆ ಬಿಜೆಪಿಯೇ ಹೊಣೆ

‘ಪಕ್ಷದಬೆಂಗಳೂರು ಕಚೇರಿಯ ಮೇಲಿನ ದಾಳಿಗೆ ರಾಜ್ಯದ ಬಿಜೆಪಿ ಸರ್ಕಾರವೇ ಹೊಣೆ, ಸರ್ಕಾರ ತಕ್ಷಣ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಡಿ.ರಾಜಾ ಆಗ್ರಹಿಸಿದರು.

‘ಕಚೇರಿಗೆ ಬೆಂಕಿ ಹಚ್ಚಲು ಪ್ರಯತ್ನಿಸಬಹುದು, ಆದರೆ ನಮ್ಮ ಪಕ್ಷದ ತತ್ವ, ಸಿದ್ಧಾಂತಕ್ಕೆ ಬೆಂಕಿ ಹಾಕಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.