ADVERTISEMENT

ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಹಿಂದೆ ವೋಟ್ ಬ್ಯಾಂಕ್ ರಾಜಕಾರಣ: ಮೇಧಾ

ಪಿಟಿಐ
Published 7 ಜುಲೈ 2022, 10:13 IST
Last Updated 7 ಜುಲೈ 2022, 10:13 IST
ಮೇಧಾ ಪಾಟ್ಕರ್
ಮೇಧಾ ಪಾಟ್ಕರ್   

ಕೋಲ್ಕತ್ತ: ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿರುವುದರ ಹಿಂದೆ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಗುರುವಾರ ಆರೋಪಿಸಿದ್ದಾರೆ.

ತಮ್ಮ ಸ್ವಂತ ಗ್ರಾಮಕ್ಕೆ ವಿದ್ಯುತ್ ಒದಗಿಸಲು ಸಾಧ್ಯವಾಗದ ಮುರ್ಮು ಅವರು ಆಡಳಿತರೂಢ ಪಕ್ಷದ ರಬ್ಬರ್ ಸ್ಟ್ಯಾಂಪ್ ಆಗಲಿದ್ದಾರೆ ಎಂದು ಪಾಟ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಮುರ್ಮ ಅವರಂತಹ ಬುಡಕಟ್ಟು ಮಹಿಳೆಯನ್ನೇ ಬಿಜೆಪಿ ಬಯಸುತ್ತಿದೆ. ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವು ಪ್ರಮುಖ ವೋಟ್ ಬ್ಯಾಂಕ್ ಆಗಿದೆ ಎಂಬುದನ್ನು ತಿಳಿದಿದೆ. ಅರಣ್ಯ ಹಕ್ಕನ್ನು ನೀಡದವರು ಆದಿವಾಸಿ ಪರ ಎಂದು ಹೇಳಲು ಸಾಧ್ಯವಿಲ್ಲ. ಅರಣ್ಯವನ್ನು ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸುವ ಹುನ್ನಾರ ಹೊಂದಿದೆ ಎಂದು ಆರೋಪಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ಮಧ್ಯಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ಸೇನಾನಿ ಬಿರ್ಸಾ ಮುಂಡಾ ಜಯಂತಿಯಲ್ಲಿ ಭಾಗವಹಿಸಿದ್ದರು.

ಇದನ್ನು ಪ್ರಶ್ನಿಸಿರುವ ಮೇಧಾ, ಪ್ರಧಾನಿ ಭೋಪಾಲಕ್ಕೆ ಹೋಗಿ ಒಂದು ದಿನದ ಕಾರ್ಯಕ್ರಮಕ್ಕಾಗಿ 30 ಕೋಟಿ ಖರ್ಚು ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಬುಡಕಟ್ಟು ಜನಾಂಗದ ಮೇಲೆ ಹಿಂಸಾಚಾರ ಘಟಿಸಿತ್ತು ಎಂದು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬುಡಕಟ್ಟು ಜನಾಂಗದವರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಜವಾಹರಲಾಲ್ ನೆಹರೂ ಬುಡಕಟ್ಟು ಪಂಚಶೀಲ, ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ (ಪಿಇಎಸ್‌ಎ) ಮತ್ತು ಅರಣ್ಯ ಹಕ್ಕು ಕಾಯ್ದೆಗಳನ್ನು ಜಾರಿಗೆ ತರಲಿ ಎಂದು ಬುಡಕಟ್ಟು ಜನಾಂಗದ ಹಕ್ಕಿಗಾಗಿ ಹೋರಾಡುತ್ತಿರುವ ಮೇಧಾ ಪಾಟ್ಕರ್ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.