ADVERTISEMENT

ವಯನಾಡು ಭೂಕುಸಿತ | ‘ರಾಷ್ಟ್ರೀಯ ವಿಪತ್ತು’ ಘೋಷಣೆಗೆ ಅವಕಾಶವಿಲ್ಲ: ವಿ.ಮುರಳೀಧರನ್‌

ಪಿಟಿಐ
Published 4 ಆಗಸ್ಟ್ 2024, 15:55 IST
Last Updated 4 ಆಗಸ್ಟ್ 2024, 15:55 IST
ವಿ.ಮುರಳೀಧರನ್‌
ವಿ.ಮುರಳೀಧರನ್‌   

ತಿರುವನಂತಪುರ: ವಯನಾಡ್‌ ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂಬುದಾಗಿ ಘೋಷಿಸಲು ಅವಕಾಶವಿಲ್ಲ ಎಂದು ಬಿಜೆಪಿ ಮುಖಂಡ ವಿ.ಮುರಳೀಧರನ್‌ ಹೇಳಿದ್ದಾರೆ.

ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವರು ಮುಂದಿಟ್ಟಿರುವ ಬೇಡಿಕೆಗೆ ಬಿಜೆಪಿಯು ಭಾನುವಾರ ಪ್ರತಿಕ್ರಿಯಿಸಿದೆ. 

‘ಅಂತಹ ಪರಿಕಲ್ಪನೆಯು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಡಿ ಅಸ್ತಿತ್ವದಲ್ಲಿಲ್ಲ. ಯುಪಿಎ ಸರ್ಕಾರದ ಅವಧಿಯಿಂದಲೂ ಈ ನೀತಿ ಬದಲಾಗಿಲ್ಲ’ ಎಂದು ಮುರಳೀಧರನ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಯಾವುದೇ ಅವಕಾಶವಿಲ್ಲ ಎಂದು 2013ರಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದರು’ ಎಂಬ ಅಂಶವನ್ನೂ ಪೋಸ್ಟ್‌ ಮಾಡಿದ್ದಾರೆ.

‘ರಾಷ್ಟ್ರೀಯ ವಿಪತ್ತು’ ಎಂಬ ಅಧಿಕೃತ ಹೆಸರು ಇಲ್ಲದಿದ್ದರೂ, ಪ್ರತಿಯೊಂದು ಪ್ರಾಕೃತಿಕ ವಿಕೋಪವನ್ನೂ ಅದರ ತೀವ್ರತೆಗೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ’ ಎಂದ ಅವರು, ‘ದುರಂತ ನಡೆದಿರುವ ಈ ಸಂದರ್ಭದಲ್ಲಿ ಅನಗತ್ಯ ವಿವಾದಗಳನ್ನು ಸೃಷ್ಟಿಸಲು ಪ್ರಯತ್ನಿಸಬೇಡಿ’ ಎಂದು ಮನವಿ ಮಾಡಿದರು.

ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಕೇಂದ್ರವು ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಎಲ್ಲ ರೀತಿಯ ನೆರವು ಒದಗಿಸಿದೆ. ವಯನಾಡ್‌ನಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯದಲ್ಲಿ ಸೇನೆಯು ಮುಂಚೂಣಿಯಲ್ಲಿದೆ ಎಂದರು.

ಬೇಡಿಕೆಯ ‘ವಿಧಿಬದ್ಧತೆ’ ಪರಿಶೀಲಿಸುತ್ತೇವೆ– ಗೋಪಿ: ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ವಿವಿಧ ವಲಯಗಳಿಂದ ಬಂದಿರುವ ಬೇಡಿಕೆಯ ಹಿಂದಿನ ಕಾನೂನುಬದ್ಧತೆಯನ್ನು ಕೇಂದ್ರ ಸರ್ಕಾರವು ಪರಿಶೀಲಿಸಲಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಭಾನುವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.