ADVERTISEMENT

ಠಾಕ್ರೆ ಸರ್ಕಾರ ಶೀಘ್ರದಲ್ಲೇ ಪತನ: ಬಿಜೆಪಿ

ಆಡಳಿತ ಅವಧಿಯನ್ನು ಪೂರ್ಣಗೊಳಿಸಲಿದ್ದೇವೆ: ಎಂವಿಎ ಭರವಸೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 11:42 IST
Last Updated 24 ನವೆಂಬರ್ 2020, 11:42 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಉದ್ಧವ್‌ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ(ಎಂವಿಎ) ಸರ್ಕಾರವು ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, ಈ ಸಂದರ್ಭದಲ್ಲೇ ‘ಈ ಮೈತ್ರಿ ಸರ್ಕಾರವು ತನ್ನಿಂದ ತಾನೇ ಶೀಘ್ರದಲ್ಲೇ ಪತನಗೊಳ್ಳಲಿದೆ’ ಎಂದು ಬಿಜೆಪಿ ಹೇಳಿದೆ.

ಆದರೆ, ಬಿಜೆಪಿ ನಾಯಕರ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಒಳಗೊಂಡಿರುವ ಎಂವಿಎ, ‘ಇದು ಬಿಜೆಪಿಯ ಕನಸಷ್ಟೇ. ಎಂವಿಎ ಆಡಳಿತಾವಧಿಯನ್ನು ಪೂರ್ಣಗೊಳಿಸಲಿದೆ. ರಾಜ್ಯದಲ್ಲಿ ‘ಆಪರೇಷನ್‌ ಕಮಲ’ ಯಶಸ್ವಿಯಾಗಲು ಬಿಡುವುದಿಲ್ಲ’ ಎಂದು ತಿಳಿಸಿದೆ.

ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಜೊತೆಗಿನ ಮೈತ್ರಿಯನ್ನು ತೊರೆದು ಹೊರಬಂದಿದ್ದ ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ, ಸೈದ್ಧಾಂತಿಕ ವಿರೋಧಿಗಳಾದ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಜೊತೆ ಕೈಜೋಡಿಸಿದ್ದರು. ಕಳೆದ ವರ್ಷ ನ.28ರಂದು ಮುಖ್ಯಮಂತ್ರಿಯಾಗಿ ಠಾಕ್ರೆ ಪ್ರಮಾಣವಚನ ಸ್ವೀಕರಿಸಿದ್ದರು. ‘ಮುಂದಿನ ಎರಡು ಮೂರು ತಿಂಗಳೊಳಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಪ್ರಸ್ತುತ ನಡೆಯುತ್ತಿರುವ ಪರಿಷತ್‌ ಚುನಾವಣೆಗಳು ಮುಗಿಯಲಿ ಎಂದಷ್ಟೇ ಕಾಯುತ್ತಿದ್ದೇವೆ’ ಎಂದು ಕೇಂದ್ರ ಸಚಿವ ರಾವ್‌ಸಾಹೇಬ್‌ ಪಾಟೀಲ್‌ ದಾನ್ವೆ ಅವರು ಸೋಮವಾರ ಹೇಳಿದ್ದರು.

ADVERTISEMENT

ಈ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ‘ಇದೊಂದು ಮೂರು ಪಕ್ಷಗಳ ಅಸ್ವಾಭಾವಿಕವಾದ ಮೈತ್ರಿ. ನಾವು ಪರಿಣಾಮಕಾರಿಯಾದ ವಿರೋಧಪಕ್ಷದ ಪಾತ್ರವನ್ನು ನಿಭಾಯಿಸುತ್ತಿದ್ದೇವೆ.ನಾನು ಯಾವುದೇ ದಿನಾಂಕವನ್ನು ಹೇಳುವುದಿಲ್ಲ. ಸರ್ಕಾರ ಪತನಗೊಂಡ ತಕ್ಷಣದಲ್ಲೇ, ಮತ್ತಷ್ಟು ಪರಿಣಾಮಕಾರಿಯಾದ, ಪರ್ಯಾಯ ಸರ್ಕಾರವು ಅಧಿಕಾರವಹಿಸಿಕೊಳ್ಳಲಿದೆ’ ಎಂದರು.

‘ಬಿಜೆಪಿ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರ ಪೂರ್ಣಾವಧಿಯನ್ನು ಪೂರೈಸಲಿದೆ’ ಎಂದು ಠಾಕ್ರೆ ಅವರಿಗೆ ನಿಕಟವಾಗಿರುವ, ಸಂಸದೀಯ ವ್ಯವಹಾರಗಳ ಸಚಿವ ಅನಿಲ್‌ ಪರಬ್‌ ಹೇಳಿದರು.

‘ಐದು ವರ್ಷಗಳನ್ನು ನಾವು ಪೂರ್ಣಗೊಳಿಸಲಿದ್ದೇವೆ. ಮುಂದಿನ 25 ವರ್ಷಗಳಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅಧಿಕಾರವನ್ನು ನೀಡುವುದಿಲ್ಲ. ಸಿಬಿಐ, ಇ.ಡಿಯ ಬೆದರಿಕೆಗಳ ಬಗ್ಗೆ ನಮಗೆ ಚಿಂತೆಯಿಲ್ಲ’ ಎಂದು ಶಿವಸೇನಾ ಮುಖ್ಯವಕ್ತಾರ ಸಂಜಯ್‌ ರಾವುತ್‌ ಹೇಳಿದ್ದಾರೆ. ‘ಬಿಜೆಪಿ ಯಾವ ಮಟ್ಟಕ್ಕಾದರೂ ಹೋಗಲಿ, ನಮ್ಮ ಸರ್ಕಾರ ಸುರಕ್ಷಿತವಾಗಿದೆ, ಸುಭದ್ರವಾಗಿದೆ’ ಎಂದು ಕಂದಾಯ ಸಚಿವ, ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಾಲಾಸಾಹೆಬ್‌ ಥೊರಟ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.