ADVERTISEMENT

ಸಂಸತ್‌ ಅಧಿವೇಶನ: ಬೆಲೆ ಏರಿಕೆಯ ಚರ್ಚೆ ಕಾವೇರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 15:27 IST
Last Updated 31 ಜುಲೈ 2022, 15:27 IST
ಸಂಸದ್‌ ಕಲಾಪ
ಸಂಸದ್‌ ಕಲಾಪ   

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನದ ದ್ವಿತೀಯಾರ್ಧವು ಸೋಮವಾರದಿಂದ ಆರಂಭವಾಗಲಿದ್ದು, ಮೊದಲ ದಿನ ಲೋಕಸಭೆ ಹಾಗೂ ಎರಡನೇ ದಿನ (ಮಂಗಳವಾರ) ರಾಜ್ಯಸಭೆಯಲ್ಲಿ ಬೆಲೆ ಏರಿಕೆ ಕುರಿತ ಚರ್ಚೆ ಕಾವೇರುವ ಸಾಧ್ಯತೆ ಇದೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಅವರ ‘ರಾಷ್ಟ್ರಪತ್ನಿ’ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದು ಕಾಂಗ್ರೆಸ್‌ ಮೇಲೆ ಮುಗಿಬೀಳಲು ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ.

ತಮ್ಮ ಹೇಳಿಕೆ ಕುರಿತು ಅಧಿರ್‌ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಆದರೆ ಬಿಜೆಪಿಯು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಕ್ಷಮೆ ಕೋರಬೇಕೆಂದು ಪಟ್ಟುಹಿಡಿಯುವ ಸಾಧ್ಯತೆ ಇದೆ.

ADVERTISEMENT

ಗುರುವಾರದ ಕಲಾಪದ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸೋನಿಯಾ ಜೊತೆ ಜಟಾಪಟಿ ನಡೆಸಿದ್ದರು. ಕಲಾಪ ಕೊನೆಗೊಂಡ ನಂತರವೂ ಸ್ಮೃತಿ ಹಾಗೂ ಬಿಜೆಪಿಯ ಇತರ ಸಂಸದರು ಸೋನಿಯಾ ಅವರನ್ನು ಲೇವಡಿ ಮಾಡಿದ್ದಾಗಿ ಆರೋಪಿಸಿರುವ ಕಾಂಗ್ರೆಸ್‌ ಸಂಸದರು, ಇದನ್ನೇ ದಾಳವಾಗಿಟ್ಟುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ.

‘ಕಲಾಪದ ವೇಳೆ ಮಾತನಾಡುವಾಗ ಸಚಿವೆ ಸ್ಮೃತಿ ಇರಾನಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ‘ಗೌರವಾನ್ವಿತರೇ’ ಅಥವಾ ‘ಮೇಡಂ’ ಎಂದು ಸಂಭೋದಿಸದೆ ‘ದ್ರೌಪದಿ ಮುರ್ಮು’ ಎಂದು ಪದೇ ಪದೇ ಕರೆದಿದ್ದಾರೆ. ಆ ಮೂಲಕ ರಾಷ್ಟ್ರಪತಿಯವರಿಗೆ ಅಗೌರವ ತೋರಿದ್ದಾರೆ. ತಮ್ಮ ಈ ವರ್ತನೆಗಾಗಿ ಅವರು ಬಹಿರಂಗ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿ ಅಧಿರ್‌ ರಂಜನ್‌ ಅವರು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ಹಿಂದಿನ ಎರಡು ವಾರಗಳಲ್ಲಿ ಲೋಕಸಭೆಯಲ್ಲಿ 15 ಗಂಟೆ 45 ನಿಮಿಷ ಹಾಗೂ ರಾಜ್ಯಸಭೆಯಲ್ಲಿ 11 ಗಂಟೆ 08 ನಿಮಿಷ ಮಾತ್ರ ಕಲಾಪ ನಡೆದಿದೆ. ಈ ಅವಧಿಯಲ್ಲಿ ಉಭಯ ಸದನಗಳಲ್ಲೂ ಕನಿಷ್ಠ 58 ಗಂಟೆ ಕಲಾಪ ನಡೆಯಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.