ADVERTISEMENT

ಬಿಜೆಪಿ–ಕಾಂಗ್ರೆಸ್‌ ಅಪವಿತ್ರ ಮೈತ್ರಿ: ಕೇಜ್ರಿವಾಲ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:00 IST
Last Updated 5 ಮಾರ್ಚ್ 2019, 19:00 IST
kejriwal
kejriwal   

ನವದೆಹಲಿ: ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಜತೆಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂಬ ವದಂತಿಗಳು ಇವೆ. ಇಂತಹ ‘ಅಪವಿತ್ರ ಮೈತ್ರಿ’ಯನ್ನು ಎದುರಿಸಲು ಎಎಪಿ ಶಕ್ತವಾಗಿದೆ ಎಂದು ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಎಎಪಿ ಜತೆಗೆ ಮೈತ್ರಿ ಬೇಡ ಎಂಬ ಕಾಂಗ್ರೆಸ್‌ ಪಕ್ಷದ ನಿರ್ಧಾರದ ಬಗ್ಗೆ ಕೇಜ್ರಿವಾಲ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನರೇಂದ್ರ ಮೋದಿ–ಅಮಿತ್‌ ಶಾ ಜೋಡಿಯನ್ನು ಸೋಲಿಸಬೇಕು ಎಂದು ಇಡೀ ದೇಶವೇ ಬಯಸುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಒಡೆಯುವ ಮೂಲಕ ಆ ಪಕ್ಷಕ್ಕೆ ಕಾಂಗ್ರೆಸ್‌ ನೆರವಾಗುತ್ತಿದೆ’ ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

‘ಕಾಂಗ್ರೆಸ್‌–ಬಿಜೆಪಿ ವಿರುದ್ಧ ಹೋರಾಡಲು ದೆಹಲಿ ಸಜ್ಜಾಗಿದೆ. ಅಪವಿತ್ರ ಮೈತ್ರಿಯನ್ನು ಜನರೇ ಸೋಲಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಚುನಾವಣೆ ಗೆಲ್ಲಲು ಬಿಜೆಪಿಗೆ ಕಾಂಗ್ರೆಸ್‌ ನೆರವಾಗುತ್ತಿದೆ. ಎಎಪಿ ಸೋಲಬೇಕು ಎಂಬುದು ಕಾಂಗ್ರೆಸ್‌ನ ನಿರೀಕ್ಷೆ. ದೇಶದಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಲು ಕಾಂಗ್ರೆಸ್‌ ನಾಯಕರ ಮೇಲೆ ಒತ್ತಡ ಇರುವಂತೆ ಕಾಣಿಸುತ್ತಿದೆ. ಸೇನೆಯನ್ನು ಮುಂದೆ ನಿಲ್ಲಿಸಿಕೊಂಡು ಚುನಾವಣೆ ಗೆಲ್ಲಲು ಬಿಜೆಪಿ ಬಯಸುತ್ತಿದೆ ಎಂದು ಎಎಪಿಯ ಹಿರಿಯ ಮುಖಂಡ ಗೋಪಾಲ್‌ ರಾಯ್‌ ಹೇಳಿದ್ದಾರೆ.

ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಎಎಪಿ ಗೆಲ್ಲಲಿದೆ. ಇತ್ತೀಚೆಗೆ, ಕಾಂಗ್ರೆಸ್‌ ಪಕ್ಷವು ಕಣ್ಣಾಮುಚ್ಚಾಲೆ ಆಡುತ್ತಿದೆ. ಆ ಪಕ್ಷವು ದೇಶದ ಜನರ ಭಾವನೆಯ ವಿರುದ್ಧ ಹೋಗಲು ನಿರ್ಧರಿಸಿದೆ ಎಂಬುದು ಶೀಲಾ ಮತ್ತು ರಾಹುಲ್‌ ಅವರ ಮಂಗಳವಾರದ ಮಾತುಕತೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ. ದೆಹಲಿಯಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ ಇದನ್ನೇ ಮಾಡಲಿದೆ ಎಂದು ರಾಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.