ADVERTISEMENT

ಲೈಂಗಿಕ ದೌರ್ಜನ್ಯದ ಪ್ರಕರಣದ ಸಹ ಆರೋಪಿಯನ್ನು ಕೌನ್ಸಿಲರ್‌ ಮಾಡಿದ ಬಿಜೆಪಿ

ಪಿಟಿಐ
Published 10 ಜನವರಿ 2026, 16:06 IST
Last Updated 10 ಜನವರಿ 2026, 16:06 IST
ಬಿಜೆಪಿ ಧ್ವಜ (ಪ್ರಾತಿನಿಧಿಕ ಚಿತ್ರ)
ಬಿಜೆಪಿ ಧ್ವಜ (ಪ್ರಾತಿನಿಧಿಕ ಚಿತ್ರ)   

ಠಾಣೆ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ತುಷಾರ್ ಆಪ್ಟೆಯನ್ನು ಇಲ್ಲಿನ ಕುಲಂಗಾವ್–ಬದ್ಲಾ‍ಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಕೌನ್ಸಿಲರ್‌ ಆಗಿ ಬಿಜೆಪಿ ನಾಮನಿರ್ದೇಶನ ಮಾಡಿದೆ.

ಆಪ್ಟೆ ನೇಮಕವನ್ನು ಕೌನ್ಸಿಲ್ ಅಧ್ಯಕ್ಷೆ ರುಚಿತಾ ಘೋರ್ಪಡೆ ಖಚಿತಪಡಿಸಿದ್ದಾರೆ. ತುಷಾರ್ ಸೇರಿ ಒಟ್ಟು ಐವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಪೈಕಿ ಬಿಜೆಪಿ ಹಾಗೂ ಶಿವಸೇನಾದಿಂದ ತಲಾ ಇಬ್ಬರು ಹಾಗೂ ಎನ್‌ಸಿಪಿಯಿಂದ ಒಬ್ಬ ಸೇರಿದ್ದಾರೆ. ತುಷಾರ್ ಆಪ್ಟೆ ಹೊರತಾಗಿ ಶಗೋಫ್ ಗೋರ್ (ಬಿಜೆಪಿ), ಫ್ರಭಾಕರ್ ಪಾಟೀಲ್ (ಎನ್‌ಸಿಪಿ), ದಿಲೀಪ್ ಬೈಕರ್ (ಶಿವಸೇನಾ) ಹಾಗೂ ಹೇಮಂತ್ ಚುತುರೆ (ಶಿವಸೇನಾ) ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

2024 ಆಗಸ್ಟ್‌ನಲ್ಲಿ ಶಾಲೆಯೊಂದರ ಶೌಚಾಲಯದಲ್ಲಿ ಬಾಲಕಿಯರ ಮೇಲೆ ಅಕ್ಷಯ್‌ ಶಿಂದೆ (24) ದೌರ್ಜನ್ಯವೆಸಗಿದ್ದ. ಈ ಪ್ರಕರಣವನ್ನು ಖಂಡಿಸಿ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಬೃಹತ್‌ ಪ್ರತಿಭಟನೆ ನಡೆಸಿದ್ದರು. ಇದೇ ಶಾಲೆಯ ಕಾರ್ಯದರ್ಶಿಯಾಗಿದ್ದ ಅಪ್ಟೆ, ದೂರು ದಾಖಲಿಸಲು ವಿಫಲರಾದ ಆರೋಪ ಎದುರಿಸುತ್ತಿದ್ದು, ಪೋಕ್ಸೊ ಕಾಯ್ದೆ ಅಡಿಯಲ್ಲಿ ಶಾಲೆಯ ಆಡಳಿತ ಸಮಿತಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ADVERTISEMENT

ಘಟನೆ ನಡೆದು 44 ದಿನಗಳ ಬಳಿಕ ಆಪ್ಟೆಯನ್ನು ಬಂಧಿಸಲಾಗಿತ್ತು. 48 ಗಂಟೆಯೊಳಗೆ ಜಾಮೀನು ಲಭಿಸಿತ್ತು. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ.

‘ತುಷಾರ್ ಆಪ್ಟೆಯವರು ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರಸಿದ್ಧ ಶಿಕ್ಷಣ ಸಂಸ್ಥೆಯ ಪದಾಧಿಕಾರಿ. ಅವರ ಮೇಲೆ ಆರೋಪ ಇದ್ದರೂ, ಅದು ಸಾಬೀತಾಗಿಲ್ಲ. ಪ್ರಕರಣದ ಮುಖ್ಯ ಆರೋಪಿಗೆ ಶಿಕ್ಷೆಯಾಗಿದೆ. ಅವರು ಪಕ್ಷಕ್ಕೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಹೀಗಾಗಿ ಅವರಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು ಬಿಜೆಪಿ ಕೌನ್ಸಿಲರ್ ರಾಜನ್ ಘೋರ್ಪಡೆ ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.