ADVERTISEMENT

ಕೋವಿಡ್ ಹೆಸರಲ್ಲಿ ಕೇಂದ್ರ ಸರ್ಕಾರ ನನ್ನ ವಿರುದ್ಧ ಪಿತೂರಿ: ರಾಹುಲ್‌ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2022, 11:30 IST
Last Updated 31 ಡಿಸೆಂಬರ್ 2022, 11:30 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಭಾರತ್‌ ಜೋಡೊ ಯಾತ್ರೆ ಕೋವಿಡ್‌–19 ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನ್ನ ವಿರುದ್ಧ ಪಿತೂರಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿರುವ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್‌ ಮಾತನಾಡಿರುವ ವಿಡಿಯೊ ತುಣುಕುಗಳನ್ನು ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದೆ.

‘ಗೃಹ ಸಚಿವಾಲಯವು ನನ್ನನ್ನು ಗುಂಡು ನಿರೋಧಕ ವಾಹನದಲ್ಲಿ ಹೋಗಿ ಎಂದು ಹೇಳುತ್ತದೆ. ನಾನು ಮಾಡುತ್ತಿರುವುದು ಪಾದಯಾತ್ರೆ, ಹೇಗೆಗುಂಡು ನಿರೋಧಕ ವಾಹನದಲ್ಲಿ ಹೋಗಲಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನಮ್ಮ ಪಾದಯಾತ್ರೆಗೆ ಯಾವ ರೀತಿ ಭದ್ರತೆ ಕೊಡಬೇಕು ಎಂಬುದು ಅವರಿಗೆ ತಿಳಿದಿದೆ. ಆದರೂ ಅವರು ಬೇಕಂತಲೇ ಸಮಸ್ಯೆ ಸೃಷ್ಟಿಸುತ್ತಿದ್ದಾರೆ‘ ಎಂದು ಕೇಂದ್ರ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ADVERTISEMENT

ನಮ್ಮ ಪಾದಯಾತ್ರೆ ಯಶಸ್ವಿಯಾಗುತ್ತಿದೆ. ಇದರಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ಕುರಿತು ಜನರಲ್ಲಿನ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಯಾತ್ರೆ ಯಶಸ್ವಿಯಾಗುತ್ತಿರುವುದನ್ನು ಸಹಿಸದೇ ಬಿಜೆಪಿ ಈ ರೀತಿ ಮಾಡುತ್ತಿದೆ. ನಮ್ಮ ಯಾತ್ರೆಗೆ ಕೋವಿಡ್‌ ಕಾರಣ ಹೇಳುವ ಬಿಜೆಪಿ, ಅವರ ಯಾತ್ರೆ, ಸಮಾರಂಭಗಳಿಗೆ ಏನು ಉತ್ತರ ಕೊಡುತ್ತಾರೆ ಎಂದು ರಾಹುಲ್‌ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯವರ ಬಳಿ ಸಾಕಷ್ಟು ಹಣ ಇದೆ. ಈ ಕಾರಣಕ್ಕೆ ಅವರು ನಮ್ಮನ್ನು ಗೇಲಿ ಮಾಡುತ್ತಾರೆ. ಯಾತ್ರೆ ವಿರುದ್ಧ ಬಿಜೆಪಿ ಸಾಕಷ್ಟು ಅಪಪ್ರಚಾರ ಮಾಡುತ್ತಿದೆ. ಇಷ್ಟೆಲ್ಲಾ ಮಾಡಿದರೂಸತ್ಯವನ್ನು ಮರೆಮಾಚಲು ಅವರಿಂದ ಸಾಧ್ಯವಿಲ್ಲ, ಜನ ಬದಲಾಗಿದ್ದಾರೆ, ನಮ್ಮ ಕಡೆ ಇದ್ದಾರೆ ಎಂದು ರಾಹುಲ್‌ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ನನ್ನ ಮೇಲೆ ಸದಾ ಟೀಕೆ ಮಾಡುತ್ತಾರೆ. ಅವರ ಟೀಕೆಗಳು ನನ್ನನ್ನು ಇನ್ನಷ್ಟು ಗಟ್ಟಿಯಾಗುವಂತೆ ಮಾಡಿವೆ. ಒಂದು ರೀತಿಯಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರೇ ನನ್ನ ಗುರುಗಳು ಎಂದು ರಾಹುಲ್‌ ಕಟುಕಿಯಾಡಿದರು.

ಬಿಜೆಪಿ ವಿರುದ್ಧ ಇರುವ ಎಲ್ಲಾ ಪ್ರತಿ ಪಕ್ಷಗಳು ನಮ್ಮ ಜೊತೆ ಇವೆ. ರಾಜಕೀಯ ಒತ್ತಡಗಳ ಪರಿಣಾಮ ಕೆಲವರು ನಮ್ಮ ಜೊತೆ ಗುರುತಿಸಿಕೊಳ್ಳಲು ತಡವಾಗುತ್ತಿದೆ. ಎಲ್ಲಾ ಪ್ರತಿ ಪಕ್ಷಗಳು ನಮ್ಮ ಜೊತೆ ಇವೆ ಎಂದು ಪುನರುಚ್ಚರಿಸಿದರು.

ಸಮಾಜವಾದಿ ಪಕ್ಷದಅಖಿಲೇಶ್ ಯಾದವ್‌ ಮತ್ತು ಬಹುಜನ ಪಕ್ಷದ ಮಯಾವತಿ ಪ್ರೀತಿಯ ಹಿಂದೂಸ್ತಾನ ಬಯಸುತ್ತಾರೆ ಎಂದು ಹೇಳಿದ ಅವರು ಭಾರತ್‌ ಜೊಡೊ ಯಾತ್ರೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದರು.

ಪ್ರತಿಪಕ್ಷಗಳು ಗಟ್ಟಿಯಾಗಿ ನಿಲ್ಲಬೇಕು ಆಗಾ ನಾವು ಬಿಜೆಪಿಯನ್ನು ಚುನಾವಣೆಗಳಲ್ಲಿ ಸುಲಭವಾಗಿಸೋಲಿಸಬಹುದು. ವಿರೋಧ ಪಕ್ಷಗಳು ಕ್ರಮಬದ್ಧ ಹೊಂದಾಣಿಕೆ ಮಾಡಿಕೊಳ್ಳಬೇಕು. ನಂತರ ಅವರ ವೈಫಲ್ಯಗಳನ್ನುಎತ್ತಿ ತೋರಿಸಲು ಜನರ ಬಳಿ ಹೋಗಬೇಕು ಎಂದು ರಾಹುಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.