ADVERTISEMENT

ತಮ್ಮ ಹಗರಣವನ್ನು ಲೆಕ್ಕ ಹಾಕಲು ವಿಪಕ್ಷಗಳು ಪಟ್ನಾದಲ್ಲಿ ಸೇರಿದ್ದವು: ನರೇಂದ್ರ ಮೋದಿ

ಅಲ್ಪಸಂಖ್ಯಾತರ ತುಷ್ಟೀಕರಣ ಇಲ್ಲ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 27 ಜೂನ್ 2023, 16:17 IST
Last Updated 27 ಜೂನ್ 2023, 16:17 IST
ಭೋಪಾಲ್‌ನಲ್ಲಿ ಮಂಗಳವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ‘ಮೇರಾ ಬೂತ್‌ ಸಬ್‌ಸೇ ಮಜಬೂತ್‌’ ಅಭಿಯಾನದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದರು
ಭೋಪಾಲ್‌ನಲ್ಲಿ ಮಂಗಳವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ‘ಮೇರಾ ಬೂತ್‌ ಸಬ್‌ಸೇ ಮಜಬೂತ್‌’ ಅಭಿಯಾನದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದರು    –ಪಿಟಿಐ ಚಿತ್ರ

ಭೋಪಾಲ್: ‘‍ಬಿಹಾರದ ಪಟ್ನಾದಲ್ಲಿ ಇತ್ತೀಚೆಗೆ ಪ್ರತಿಪಕ್ಷಗಳ ಫೋಟೊ ಸೆಷನ್‌ ನಡೆಯಿತು. ತಾವು ಎಸಗಿರುವ ಹಗರಣಗಳ ಬಗ್ಗೆ ಲೆಕ್ಕ ಹಾಕಲು ವಿಪಕ್ಷ ನಾಯಕರು ಅಲ್ಲಿ ಸಭೆ ಸೇರಿದ್ದರು. ಅವರೆಲ್ಲರ ಹಗರಣಗಳ ಮೊತ್ತವೇ ₹ 20 ಲಕ್ಷ ಕೋಟಿ ದಾಟುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದರು. 

ಇಲ್ಲಿ ಮಂಗಳವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಮೇರಾ ಬೂತ್‌ ಸಬ್‌ಸೇ ಮಜಬೂತ್‌ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಗ್ಯಾರಂಟಿ ಎಂಬ ಪದ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ. ಜೊತೆಗೆ, ಲಾಭಗಳಿಸುವ ಕರೆನ್ಸಿ ಆಗಿದೆ’ ಎಂದರು.

ADVERTISEMENT

ಆರ್‌ಜೆಡಿ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಹಗರಣಗಳಲ್ಲಿ ಭಾಗಿಯಾಗಿವೆ. ಅದರ ಲೆಕ್ಕಾಚಾರ ನಡೆಸಲು ಈಗ ಸಭೆ ನಡೆಸುತ್ತಿವೆ ಎಂದು ಲೇವಡಿ ಮಾಡಿದರು.

‘ವಿರೋಧ ಪಕ್ಷಗಳು ಮತ್ತಷ್ಟು ಹಗರಣಗಳನ್ನು ಎಸಗುವುದು ಗ್ಯಾರಂಟಿ. ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೂ ಈ ಬಗ್ಗೆ ತಿಳಿಸಬೇಕು. ಕೇಂದ್ರವು ಹಗರಣಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿದೆ’ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ಒಗ್ಗೂಡುವವರ ಬಗ್ಗೆ ನಮಗೆ ಭಯವಿಲ್ಲ. ಅವರ ಬಗ್ಗೆ ನಮಗೆ ಸಹಾನುಭೂತಿ ಇದೆ ಎಂದು ತಿಳಿಸಿದರು.

ಓಲೈಕೆ ಇಲ್ಲ: ‘ಬಿಜೆಪಿ ಎಂದಿಗೂ ಅಲ್ಪಸಂಖ್ಯಾತರ ತುಷ್ಟೀಕರಣ ಹಾಗೂ ಮತಬ್ಯಾಂಕ್‌ ರಾಜಕಾರಣವನ್ನು ಅಳವಡಿಸಿಕೊಳ್ಳುವುದಿಲ್ಲ. ಕೆಲವರು ತುಷ್ಟೀಕರಣ ನೀತಿ ಅಳವಡಿಸಿಕೊಂಡಿದ್ದಾರೆ. ಇದು ದೇಶಕ್ಕೆ ಆಪತ್ತು ತಂದಿದೆ’ ಎಂದು ಕಾಂಗ್ರೆಸ್‌ ವಿರುದ್ಧ ಟೀಕಿಸಿದರು. 

ಬಿಜೆಪಿಯದ್ದು ಸಂತುಷ್ಟೀಕರಣ ನೀತಿ. ಇದೇ ಹಾದಿಯಲ್ಲಿ ಸಾಗುತ್ತೇವೆ ಎಂದರು.

ಬಿಹಾರದ ಪಟ್ನಾದಲ್ಲಿ ಪಸ್ಮಾಂಡ ಮುಸ್ಲಿಂ ಸಮುದಾಯವಿದೆ. ಮತಬ್ಯಾಂಕ್‌ ರಾಜಕಾರಣದ ಪರಿಣಾಮ ತೀರಾ ಹಿಂದುಳಿದಿದೆ. ಅವರನ್ನು ಇಂದಿಗೂ ತಾರತಮ್ಯದಿಂದಲೇ ನೋಡಲಾಗುತ್ತಿದೆ. ನಾವು ಪಕ್ಷಪಾತ ಮಾಡದೆ ಅವರ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದರು.

ಕಳೆದ ವರ್ಷ ನಡೆದ ಉತ್ತರ ಪ್ರದೇಶದ ಮುಸ್ಲಿಂ ಬಾಹುಳ್ಯ ಹೆಚ್ಚಿರುವ ಅಜಂಗಢ ಮತ್ತು ರಾಯಪುರ್‌ ಲೋಕಸಭಾ ಕ್ಷೇತ್ರದ ಉಪ ಚುನಾಣೆಯಲ್ಲಿ ಬಿಜೆಪಿ ಜಯಗಳಿಸಿತ್ತು. 2024ರ ಚುನಾವಣೆಯಲ್ಲೂ ಇದೇ ಹಾದಿಯಲ್ಲಿ ಸಾಗುತ್ತೇವೆ ಎಂದು ತಿಳಿಸಿದರು.

ಉತ್ತರ ಪ್ರದೇಶ, ಬಿಹಾರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಬಹಳಷ್ಟು ಜಾತಿಗಳು ಅಭಿವೃದ್ಧಿಯಿಂದ ಹಿಂದುಳಿದಿವೆ. ಇದಕ್ಕೆ ತುಷ್ಟೀಕರಣ ನೀತಿಯೇ ಕಾರಣ ಎಂದು ಟೀಕಿಸಿದರು.

ಪಾಕ್‌ನಲ್ಲಿ ತ್ರಿವಳಿ ತಲಾಖ್‌ ಏಕಿಲ್ಲ?

‘ಈಜಿಪ್ಟ್‌ನಲ್ಲಿ 80 ರಿಂದ 90 ವರ್ಷಗಳ ಹಿಂದೆಯೇ ತ್ರಿವಳಿ ಇಲಾಖ್ ಪದ್ಧತಿಯನ್ನು ನಿಷೇಧಿಸಲಾಗಿದೆ. ಭಾರತದಲ್ಲಿಯೂ ಇದರ ಅಗತ್ಯವಿದೆ ಎಂದು ಪ್ರತಿಪಾದಿಸುವುದಾದರೆ ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಇದನ್ನೇಕೆ ರದ್ದುಪಡಿಸಲಾಗಿದೆ’ ಎಂದು ಮೋದಿ ಪ್ರಶ್ನಿಸಿದರು.

ಅನ್ಯಾಯಕ್ಕೆ ತುತ್ತಾದ ಮುಸ್ಲಿಂ ಪುತ್ರಿಯರಿಗೆ ತ್ರಿವಳಿ ತಲಾಖ್‌ನಿಂದ ಎಂದಿಗೂ ನ್ಯಾಯ ಸಿಗುವುದಿಲ್ಲ. ಇದರಿಂದ ಬಹಳಷ್ಟು ಕುಟುಂಬಗಳು ಸಂಕಷ್ಟ ಅನುಭವಿಸಿವೆ. ಇಸ್ಲಾಂ ಭಾಗವಾಗಿ ಇದರ ಅಗತ್ಯವಿದೆ ಎನ್ನುವುದಾದರೆ ಕತಾರ್‌, ಜೋರ್ಡಾನ್‌, ಇಂಡೋನೇಷ್ಯಾದಲ್ಲಿ ಏಕೆ ರದ್ದುಪಡಿಸಲಾಗಿದೆ ಎಂದರು.

ಈ ಪದ್ಧತಿಯಿಂದ ಮುಸ್ಲಿಂ ಹೆಣ್ಣುಮಕ್ಕಳು ಘೋರ ಅನ್ಯಾಯಕ್ಕೆ ತುತ್ತಾಗುತ್ತಿದ್ದರು. ಇಂತಹ ಪದ್ಧತಿಗೆ ಪ್ರತಿಪಕ್ಷಗಳು ಬೆಂಬಲ ನೀಡುತ್ತಿವೆ ಎಂದು ಟೀಕಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.