ADVERTISEMENT

ಬಗ್ಗಾ ಬಂಧನ ಪ್ರಹಸನ: ಪಂಜಾಬ್‌ ಪೊಲೀಸರಿಂದ ಬಿಜೆಪಿ ಮುಖಂಡನ ಸೆರೆ

ಪಿಟಿಐ
Published 6 ಮೇ 2022, 20:22 IST
Last Updated 6 ಮೇ 2022, 20:22 IST
ಪೊಲೀಸ್ ಬಂಧನದಲ್ಲಿದ್ದ ತಜಿಂದರ್ ಸಿಂಗ್ ಬಗ್ಗಾ –ಪಿಟಿಐ ಚಿತ್ರ
ಪೊಲೀಸ್ ಬಂಧನದಲ್ಲಿದ್ದ ತಜಿಂದರ್ ಸಿಂಗ್ ಬಗ್ಗಾ –ಪಿಟಿಐ ಚಿತ್ರ   

ನವದೆಹಲಿ/ಚಂಡೀಗಡ:ದೆಹಲಿ ಬಿಜೆಪಿಯ ಮುಖಂಡ ತಜಿಂದರ್ ಸಿಂಗ್ ಬಗ್ಗಾರನ್ನು ಪಂಜಾಬ್‌ ಪೊಲೀಸರು ದೆಹಲಿಯಲ್ಲಿ ಬಂಧಿಸಿ, ಮೊಹಾಲಿಯತ್ತ ಒಯ್ದಿದ್ದಾರೆ. ಪಂಜಾಬ್‌ ಪೊಲೀಸರನ್ನು ಕುರುಕ್ಷೇತ್ರದ ಬಳಿ ಹರಿಯಾಣ ಪೊಲೀಸರು ತಡೆಹಿಡಿದಿದ್ದಾರೆ. ಕುರುಕ್ಷೇತ್ರಕ್ಕೆ ಬಂದ ದೆಹಲಿ ಪೊಲೀಸರು, ಬಗ್ಗಾರನ್ನು ದೆಹಲಿಗೆ ವಾಪಸ್ ಕರೆದೊಯ್ದಿದ್ದಾರೆ. ಇದು ಬಿಜೆಪಿ ಮತ್ತು ಎಎಪಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.

ಈ ಕಾರ್ಯಾಚರಣೆ ಸಂಬಂಧ ಪಂಜಾಬ್‌–ಹರಿಯಾಣ ಹೈಕೋರ್ಟ್‌ನಲ್ಲಿ ಪಂಜಾಬ್‌ ಸರ್ಕಾರವು ಹೇಬಿಯಸ್ ಕಾರ್ಪಸ್ಅರ್ಜಿ ಸಲ್ಲಿ
ಸಿದೆ.ಪಂಜಾಬ್‌ ಸರ್ಕಾರವು ಹೇಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿರುವುದನ್ನು ದೆಹಲಿ ಪೊಲೀಸರ ಪರ ವಕಾಲತ್ತು ವಹಿಸಿಕೊಂಡಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್‌ ಜೈನ್‌ ಪ್ರಶ್ನಿಸಿದ್ದಾರೆ. ಪಂಜಾಬ್‌ ಸರ್ಕಾರವು, ಬಗ್ಗಾ ಅವರನ್ನು ದೆಹಲಿ ಪೊಲೀಸರ ವಶಕ್ಕೆ ನೀಡಬಾರದು ಮತ್ತು ಹರಿಯಾಣದಲ್ಲೇ ಬಂಧನದಲ್ಲಿ ಇರಿಸಬೇಕು ಎಂದು ಕೋರಿದೆ. ಈ ಎರಡೂ ಮನವಿಯನ್ನು ಹೈಕೋರ್ಟ್‌ ನಿರಾಕರಿಸಿದೆ ಮತ್ತು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದೆ.

ಏಪ್ರಿಲ್‌ನಲ್ಲಿ ಪ್ರಕರಣ ದಾಖಲು:
ಕೋಮು ಭಾವನೆ ಕೆರಳಿಸಿದ, ಎರಡು ಕೋಮುಗಳ ಮಧ್ಯೆ ದ್ವೇಷ ಹುಟ್ಟುಹಾಕಿದ ಆರೋಪದಲ್ಲಿ ಪಂಜಾಬ್‌ನ ಮೊಹಾಲಿಯಲ್ಲಿ ಬಗ್ಗಾ ವಿರುದ್ಧ ಏಪ್ರಿಲ್‌ 1ರಂದು ಪ್ರಕರಣ ದಾಖಲಿಸಲಾಗಿತ್ತು. ಎಎಪಿ ನಾಯಕರು ನೀಡಿದ್ದ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿತ್ತು.

ADVERTISEMENT

ದೆಹಲಿಯ ಜನಕಪುರಿಯಲ್ಲಿರುವ ಬಗ್ಗಾ ಅವರ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ ಪಂಜಾಬ್‌ ಪೊಲೀಸರು ಬಂದಿದ್ದಾರೆ. ಬಗ್ಗಾರನ್ನು ಬಂಧಿಸಿ, ಮೊಹಾಲಿಯತ್ತ ಪ್ರಯಾಣ ಆರಂಭಿಸಿದ್ದಾರೆ. ಅದರ ಬೆನ್ನಲ್ಲೇ ಬಗ್ಗಾ ಅವರ ತಂದೆ ಪ್ರೀತ್‌ಪಾಲ್‌ ಸಿಂಗ್ ಬಗ್ಗಾ ಅವರು ದೆಹಲಿ ಪೊಲೀಸರಲ್ಲಿ ಅಪಹರಣದ ದೂರು ನೀಡಿದ್ದಾರೆ

‘ಮನೆಗೆ 10–15 ಜನರು ನುಗ್ಗಿದರು. ನನ್ನ ಮುಖಕ್ಕೆ ಗುದ್ದಿದರು. ನನ್ನ ಮಗನನ್ನು ಎಳೆದೊಯ್ದರು. ವಿಡಿಯೊ ಮಾಡಲು ಆರಂಭಿಸಿದಾಗ, ನನ್ನ ಫೋನ್‌ ಅನ್ನು ಕಸಿದುಕೊಂಡರು’ ಎಂದು ಪ್ರೀತ್‌ಪಾಲ್‌ ಸಿಂಗ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಅನ್ವಯ ದೆಹಲಿ
ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಷ್ಟರಲ್ಲಾಗಲ್ಲೇ ಪಂಜಾಬ್‌ ಪೊಲೀಸರು ಹರಿಯಾಣದ ಕುರುಕ್ಷೇತ್ರವನ್ನು ಹಾದು ಹೋಗುತ್ತಿದ್ದರು.
ಅವರನ್ನು ಹೆದ್ದಾರಿಯಲ್ಲೇ ತಡೆದ ಹರಿಯಾಣ ಪೊಲೀಸರು, ಕುರುಕ್ಷೇತ್ರದ ಠಾಣೆಯೊಂದಕ್ಕೆ ಕರೆದೊಯ್ದಿದ್ದಾರೆ.

‘ತಜಿಂದರ್ ಬಗ್ಗಾ ಅವರನ್ನು ಬಲವಂತವಾಗಿ ಹೊತ್ತೊಯ್ಯಲಾಗಿದೆ ಎಂದು ಮಾಹಿತಿ ಬಂದಿದೆ. ಹೀಗಾಗಿ ಪರಿಶೀಲನೆ ನಡೆಸಬೇಕಿದೆ’ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಬಂದ ದೆಹಲಿ ಪೊಲೀಸರು, ಬಗ್ಗಾ ಅವರನ್ನು ಪಂಜಾಬ್‌ ಪೊಲೀಸರಿಂದ ಬಿಡಿಸಿಕೊಂಡು ದೆಹಲಿಗೆ
ಕರೆದೊಯ್ದಿದ್ದಾರೆ.

ಬಗ್ಗಾ ಅವರ ತಂದೆಯ ದೂರಿನ ಆಧಾರದ ಮೇಲೆ ಪಂಜಾಬ್‌ ಪೊಲೀಸರ ವಿರುದ್ಧ ದೆಹಲಿ ಪೊಲೀಸರು ಅತಿಕ್ರಮ ಪ್ರವೇಶ,ಆಸ್ತಿಗೆ ಹಾನಿ, ಅಪಹರಣ, ದರೋಡೆ ಮತ್ತುಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.