ADVERTISEMENT

ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ಬಿಜೆಪಿ ನಾಯಕರು, ಪೊಲೀಸರ ಕೈವಾಡ: ಎಎಪಿ ಆರೋಪ

ಬಿಜೆಪಿ ನಾಯಕರ ಮಂಪರು ಪರೀಕ್ಷೆಗೆ ಆಗ್ರಹ

ಪಿಟಿಐ
Published 2 ಮಾರ್ಚ್ 2020, 4:58 IST
Last Updated 2 ಮಾರ್ಚ್ 2020, 4:58 IST
   

ನವದೆಹಲಿ: ಈಶಾನ್ಯ ದೆಹಲಿಯಲ್ಲಿ 46 ಜನರ ಸಾವಿಗೆ ಕಾರಣವಾದ ಹಿಂಸಾಚಾರದ ಹಿಂದೆ ಬಿಜೆಪಿ ನಾಯಕರ ಮತ್ತು ಪೊಲೀಸರ ಕೈವಾಡವಿದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಹಿಂಸಾಚಾರದ ಬಗ್ಗೆ ಸಂಸದೀಯ ಸಮಿತಿ ಮತ್ತು ಹೈಕೋರ್ಟ್‌ ಜಡ್ಜ್‌ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದೆ.

ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿ ನಾಯಕರನ್ನು ಮತ್ತು ಪೊಲೀಸರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಎಎಪಿ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಆಗ್ರಹಿಸಿದ್ದಾರೆ.

‘ಬಿಜೆಪಿಯ ವ್ಯವಸ್ಥಿತ ಪಿತೂರಿಂದ ದೆಹಲಿ ಹಿಂಸಾಚಾರ ನಡೆದಿದೆ. ಇದರಲ್ಲಿ ಬಿಜೆಪಿ ನಾಯಕರು ಮತ್ತು ಪೊಲೀಸರು ಶಾಮೀಲಾಗಿದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇದನ್ನು ನೇರ ಪ್ರಸಾರ ಮಾಡಬೇಕು. ಇದರಿಂದ ಇಡೀ ದೇಶಕ್ಕೆ ಸತ್ಯ ಏನೆಂದು ಗೊತ್ತಾಗಲಿದೆ’ ಎಂದು ಸಿಂಗ್ ಹೇಳಿದ್ದಾರೆ.

ADVERTISEMENT

ದೆಹಲಿಯಲ್ಲಿ ಗಲಭೆಗೆ ಪ್ರಚೋದನೆ ನೀಡಲು ಹೊರಗಿನವರನ್ನು ಕರೆಸಲಾಗಿತ್ತು. ಇದರಿಂದ, ಬಿಜೆಪಿ ಕುಮ್ಮಕ್ಕಿನಿಂದಲೇ ಗಲಭೆಗಳು ನಡೆದಿವೆ ಎಂಬುದು ದೃಢಪಟ್ಟಿದೆ ಎಂದೂ ಅವರು ಹೇಳಿದ್ದಾರೆ.

ಈ ಮಧ್ಯೆ, ಕಳೆದೊಂದು ವಾರದಿಂದ ಗಲಭೆಗಳಿಂದ ನಲುಗಿದ್ದ ದೆಹಲಿಯಲ್ಲಿ ಪರಿಸ್ಥಿತಿ ತಿಳಿಯಾಗುತ್ತಿದೆ. ಆಗ್ನೇಯ ಮತ್ತು ಪಶ್ಚಿಮ ದೆಹಲಿಯಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸಿ ಜನರ ಆತಂಕಕ್ಕೆ ಕಾರಣವಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.