ADVERTISEMENT

ಬಂಗಾಳದಲ್ಲಿ ಬಿಜೆಪಿಯೀಗ ಪ್ರಮುಖ ಪ್ರತಿಪಕ್ಷ, ಸಿದ್ಧಾಂತ ಪ್ರಚಾರ ಸಾಗಲಿದೆ: ನಡ್ಡಾ

ಪಿಟಿಐ
Published 3 ಮೇ 2021, 1:18 IST
Last Updated 3 ಮೇ 2021, 1:18 IST
ಜೆ.ಪಿ.ನಡ್ಡಾ (ಪಿಟಿಐ ಚಿತ್ರ)
ಜೆ.ಪಿ.ನಡ್ಡಾ (ಪಿಟಿಐ ಚಿತ್ರ)   

ನವದೆಹಲಿ: ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮ ಪರಿಣಾಮವಾಗಿ ಬಿಜೆಪಿಯು ಇಂದು ಪಶ್ಚಿಮ ಬಂಗಾಳದಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಪಕ್ಷವು ಪಶ್ಚಿಮ ಬಂಗಾಳದಲ್ಲಿ ತನ್ನ ಸಿದ್ಧಾಂತವನ್ನು ಪ್ರಚಾರ ಮಾಡುವ ಕಾರ್ಯದಲ್ಲಿ ಮುಂದೆಯೂ ತೊಡಗಿಕೊಳ್ಳಲಿದೆ. ‘ಸೋನಾರ್ ಬಂಗಾಳ’ ಕನಸನ್ನು ನನಸು ಮಾಡಲು ಶ್ರಮಿಸಲಿದೆ ಎಂದು ಅವರು ಹೇಳಿದ್ದಾರೆ.

ಪಕ್ಷವು ಬಂಗಾಳದ ಜನರ ಆದೇಶವನ್ನು ಹೃತ್ಪೂರ್ವಕವಾಗಿ ಗೌರವಿಸುತ್ತದೆ ಮತ್ತು ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ ಎಂದು ನಡ್ಡಾ ಹೇಳಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ಚುನಾವಣೆಯಲ್ಲಿ ಕಠಿಣ ಪರಿಶ್ರಮ ಮತ್ತು ದೃಢತೆಯಿಂದ ಕಾರ್ಯನಿರ್ವಹಿಸಿದ್ದಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ, ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ಬಿಜೆಪಿಯು ಬಂಗಾಳದ ಪ್ರತಿಯೊಂದು ಮನೆಗೂ ತನ್ನ ಸಿದ್ಧಾಂತವನ್ನು ತಲುಪಿಸಲಿದೆ. ‘ಸೋನಾರ್ ಬಂಗಾಳ’ಕ್ಕಾಗಿ ಕೆಲಸ ಮಾಡಲಿದೆ. ಈ ಬಾರಿಯ ಫಲಿತಾಂಶವು ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮದ ಫಲವಾಗಿದೆ. ಪರಿಣಾಮವಾಗಿಯೇ ಬಿಜೆಪಿಯು ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ ಎಂದು ನಡ್ಡಾ ಹೇಳಿದ್ದಾರೆ.

ಅಸ್ಸಾಂ ಮತ್ತು ಪುದುಚೇರಿಯಲ್ಲಿ ಪಕ್ಷದ ಮೇಲೆ ನಂಬಿಕೆ ಇರಿಸಿ ಅಧಿಕಾರಕ್ಕೇರಿಸಿರುವ ಮತದಾರರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ತಮಿಳುನಾಡು ಮತ್ತು ಕೇರಳದಲ್ಲಿ ಜನಾದೇಶವನ್ನು ಒಪ್ಪಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕೇಂದ್ರದ ಸಚಿವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರನ್ನು ಅಭಿನಂದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.