ADVERTISEMENT

ಯುಪಿ: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ 100ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಕೊಕ್

ಸಂಜಯ ಪಾಂಡೆ
Published 1 ಅಕ್ಟೋಬರ್ 2021, 12:46 IST
Last Updated 1 ಅಕ್ಟೋಬರ್ 2021, 12:46 IST
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್   

ಲಖನೌ: ಉತ್ತರ ಪ್ರದೇಶದಲ್ಲಿ ಸಂಭಾವ್ಯ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ಬಿಜೆಪಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ
ನೂರಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಲಖನೌದಲ್ಲಿನ ರಾಜ್ಯ ಬಿಜೆಪಿಯ ಮೂಲಗಳ ಪ್ರಕಾರ, ಕೇಸರಿ ಪಕ್ಷವು ತಮ್ಮ ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲದ ಮತ್ತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿರುವ 100ಕ್ಕೂ ಹೆಚ್ಚು ಹಾಲಿ ಶಾಸಕರನ್ನು ಮತ್ತೆ ಕಣಕ್ಕಿಳಿಸದಿರಲು ನಿರ್ಧರಿಸಿದೆ ಎಂದು ಗೊತ್ತಾಗಿದೆ.

ಇದರಲ್ಲಿ, ಎಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವವರು ಸೇರಿದ್ದಾರೆ’ ಎಂದು ಯುಪಿಯ ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ADVERTISEMENT

ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ವಿವಿಧ ಕ್ಷೇತ್ರಗಳಲ್ಲಿನ ಕಾರ್ಯಕರ್ತರ ಪ್ರತಿಕ್ರಿಯೆಯನ್ನು ಪಡೆಯಲು ಪಕ್ಷವು ಸಮೀಕ್ಷೆಯನ್ನು ಸಹ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ಬಿಜೆಪಿ ಶಾಸಕರು ರಾಜ್ಯ ಸರ್ಕಾರದ ವಿರುದ್ಧವೇ ಧ್ವನಿ ಎತ್ತುತಿದ್ದಾರೆ. ವಿಶೇಷವಾಗಿ ಕೋವಿಡ್ -19 ರ ಎರಡನೇ ಅಲೆಯ ಸಮಯದಲ್ಲಿ ದುರಾಡಳಿತದ ಬಗ್ಗೆ ಆರೋಪ ಮಾಡಿದ್ದಾರೆ. ಪ್ರಭಾವಿ 'ಬ್ರಾಹ್ಮಣ' ಸಮುದಾಯದಿಂದ ಬಂದಿರುವ ಕೆಲವು ಶಾಸಕರು ಸಹ ರಾಜ್ಯ ಸರ್ಕಾರವು ತಮ್ಮ ಸಮುದಾಯದ ಸದಸ್ಯರಿಗೆ 'ಕಿರುಕುಳ ನೀಡುತ್ತಿದೆ' ಎಂದು ಆರೋಪಿಸಿದ್ದರು.

ಅವರಲ್ಲಿ ಒಬ್ಬರಾದ ಸೀತಾಪುರ ಸದರ್ ವಿಧಾನಸಭಾ ಕ್ಷೇತ್ರದ ಶಾಸಕ ರಾಕೇಶ್ ರಾಥೋಡ್ ಅವರು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದು, ಅವರು ಶೀಘ್ರದಲ್ಲೇ ಕೇಸರಿ ಪಕ್ಷವನ್ನು ತೊರೆದು ಎಸ್ಪಿ ಸೇರಬಹುದು ಎಂಬ ಊಹಾಪೋಹಗಳು ಎದ್ದಿವೆ.

ಈ ಹಿಂದೆ ಕೂಡ ಹಲವು ಬಿಜೆಪಿ ಶಾಸಕರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರನ್ನು ಬದಲಾಯಿಸಬೇಕೆಂಬ ಬೇಡಿಕೆಗಳು ಇದ್ದವು. ಆದರೆ, ಬಿಜೆಪಿ ಕೇಂದ್ರ ನಾಯಕತ್ವವು, ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಪಕ್ಷದ ಮುಖ ಎಂದು ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.