ADVERTISEMENT

Delhi Polls|ಪೊಲೀಸರ ನೆರವಿನಿಂದ AAP ಪ್ರಚಾರಕ್ಕೆ BJP ಅಡ್ಡಿ:ಕೇಜ್ರಿವಾಲ್‌ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 9:54 IST
Last Updated 22 ಜನವರಿ 2025, 9:54 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಪಕ್ಷ ಕೈಗೊಳ್ಳುವ ಪ್ರಚಾರ ಕಾರ್ಯಕ್ರಮಗಳನ್ನು ಅಡ್ಡಿಪಡಿಸಲು ಹಾಗೂ ಮತದಾರರನ್ನು ಹೆದರಿಸುವ ಉದ್ದೇಶದಿಂದಾಗಿ ಬಿಜೆಪಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ಆರೋಪಿಸಿದ್ದಾರೆ.

ಇಲ್ಲಿ ನಡೆದ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯ ಪೊಲೀಸರು ಬಿಜೆಪಿ ಜತೆಗಿದ್ದಾರೆ. ಜನರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿಲ್ಲ. ಎಎಪಿ ನಡೆಸುವ ರ‍್ಯಾಲಿಗಳಿಗೆ ಅಡ್ಡಿಪಡಿಸುವಂತೆ ಗೃಹ ಸಚಿವಾಲಯದಿಂದ ನೇರ ಸೂಚನೆಗಳು ಬರುತ್ತೇವೆ ಎಂದು ದೂರಿದ್ದಾರೆ.

'ದೆಹಲಿಯಲ್ಲಿ ಬಿಜೆಪಿ ಐತಿಹಾಸಿಕ ಸೋಲು ಅನುಭವಿಸುತ್ತದೆ. ಇದೇ ಕಾರಣದಿಂದಾಗಿ ಪೊಲೀಸರ ಬೆಂಬಲದೊಂದಿಗೆ ಗೂಂಡಾಗಿರಿ ಪ್ರದರ್ಶಿಸುತ್ತಿದೆ. ಆದರೆ ಈ ಬಾರಿ ಮತದಾರರು ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ' ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ADVERTISEMENT

'ಬಿಜೆಪಿ ನಡೆಸುವ ಚುನಾವಣಾ ಪ್ರಚಾರಗಳಿಗೆ ಪೊಲೀಸರು ಅನುವು ಮಾಡಿಕೊಡುತ್ತಾರೆ. ಆದರೆ ಎಎಪಿ ಕೈಗೊಳ್ಳುವ ಪ್ರಚಾರ ಕಾರ್ಯಕ್ರಮಗಳಿಗೆ ಪೊಲೀಸರು ಅಡ್ಡಿಪಡಿಸುತ್ತಾರೆ. ಕಲ್ಕಾಜಿ ಕ್ಷೇತ್ರ ಸೇರಿದಂತೆ ಹಲವೆಡೆ ಎಎಪಿ ಕಾರ್ಯಕರ್ತರನ್ನು ಬಿಜೆಪಿಗೆ ಸೇರುವಂತೆ ಆ ಪಕ್ಷದವರು ಬೆದರಿಕೆ ಹಾಕುತ್ತಿದ್ದಾರೆ' ಎಂದು ಕೇಜ್ರಿವಾಲ್‌ ಕಿಡಿಕಾರಿದ್ದಾರೆ.

70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭಾ ಚುನಾವಣೆಯು ಫೆಬ್ರುವರಿ 5ರಂದು ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.