ADVERTISEMENT

ನೀರಿನ ಸಮಸ್ಯೆ ಹೇಳಲು ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಗುಜರಾತಿನ ಬಿಜೆಪಿ ಶಾಸಕ!

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 13:17 IST
Last Updated 3 ಜೂನ್ 2019, 13:17 IST
ಬಲರಾಂ ಥವಾನಿ
ಬಲರಾಂ ಥವಾನಿ    

ನವದೆಹಲಿ: ಗುಜರಾತಿನ ನರೋದ ಚುನಾವಣಾ ಕ್ಷೇತ್ರದ ಬಿಜೆಪಿ ಶಾಸಕ ಬಲರಾಂ ಥವಾನಿ ಮಹಿಳೆಯೊಬ್ಬರಿಗೆ ಥಳಿಸಿ, ಕಾಲಿನಿಂದ ಒದೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಶಾಸಕನಿಂದ ದೌರ್ಜನ್ಯಕ್ಕೊಳಾದ ಮಹಿಳೆ ಎನ್‌ಸಿಪಿ ಬೆಂಬಲಿಗಳಾದ ನೀತೂ ತೇಜ್‌ವನಿ. ಅಹ್ಮದಾಬಾದ್‌ನ ನರೋದಾದಲ್ಲಿ ನೀರಿನ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ ಎಂದು ಭಾನುವಾರ ನಡೆದ ಪ್ರತಿಭಟನೆಯಲ್ಲಿ ಈಕೆ ಭಾಗಿಯಾಗಿದ್ದರು.

ಘಟನೆ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನೀತೂ 'ನಮ್ಮ ಪ್ರದೇಶದಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ.ಈ ಬಗ್ಗೆ ಚರ್ಚಿಸಲು ಬಲರಾಂ ಬಳಿ ಹೋಗಿದ್ದೆ, ಆದರೆ ಏನೂ ಮಾತನಾಡದೆ ಆತ ಬಂದು ನನ್ನ ಕೆನ್ನೆಗೆ ಬಾರಿಸಿ ಹೊಡೆಯಲು ತೊಡಗಿದ. ಇದನ್ನು ನೋಡಿ ನನ್ನ ಗಂಡ ನನ್ನನ್ನು ರಕ್ಷಿಸಲು ಓಡಿ ಬಂದರು.ಆಗ ಬಲರಾಂ ಅವರ ಬೆಂಬಲಿಗರು ಬಂದು ನನ್ನ ಮೇಲೆ ಮತ್ತು ಗಂಡನ ಮೇಲೆ ಬಡಿಗೆಯಿಂದ ಹೊಡೆದುಹಲ್ಲೆ ನಡೆಸಿದರು. ನನ್ನೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯರ ಮೇಲೆಬಲರಾಂ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಮಹಿಳೆಯರು ಹೇಗೆ ಸುರಕ್ಷಿತರಾಗಿರಲಿ ಎಂದು ನಾನು ಮೋದಿಯವರಲ್ಲಿ ಕೇಳುತ್ತಿದ್ದೇನೆ' ಎಂದಿದ್ದಾರೆ.

ADVERTISEMENT

ಈ ಘಟನೆ ಬಗ್ಗೆ ಬಲರಾಂ ಥೆವಾನಿ ಕ್ಷಮೆಯಾಚಿಸಿದ್ದು, ನಾನು ಉದ್ದೇಶಪೂರ್ವಕ ಈ ಕೃತ್ಯವೆಸಗಿಲ್ಲ ಎಂದಿದ್ದಾರೆ.

ನನ್ನ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗಲಿಲ್ಲ. ನಾನು ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ. ಅದು ಉದ್ದೇಶಪೂರ್ವಕ ಆಗಿರಲಿಲ್ಲ. ನಾನು ಕಳೆದ 22 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಈ ರೀತಿಯ ಘಟನೆ ಈ ಹಿಂದೆ ಎಂದೂ ಆಗಿರಲಿಲ್ಲ. ನಾನು ಆಕೆಯಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಥೆವಾನಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಕೆಲವು ದಿನಗಳ ಹಿಂದೆ ಹರ್ಯಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಬೆಲ್ಟ್‌ನಿಂದ ಮಹಿಳೆಗೆ ಹೊಡೆಯುತ್ತಿರುವ ವಿಡಿಯೊ ವೈರಲ್ ಆಗಿತ್ತು.ಈ ಪ್ರಕರಣದಲ್ಲಿ ಐವರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮಧ್ಯಪ್ರದೇಶದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ಎಳೆದಾಡುತ್ತಿರುವ ವಿಡಿಯೊ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.