ADVERTISEMENT

‘ಕೆಬಿಸಿ’ ಪ್ರಶ್ನೆಗೆ ಆಕ್ಷೇಪ: ಅಮಿತಾಭ್‌ ವಿರುದ್ಧ ದೂರು ನೀಡಿದ ಬಿಜೆಪಿ ಶಾಸಕ

ಹಿಂದೂಗಳ ಭಾವನೆ ನೋಯಿಸುವ ಯತ್ನವೆಂಬ ಆರೋಪ

ಪಿಟಿಐ
Published 3 ನವೆಂಬರ್ 2020, 9:08 IST
Last Updated 3 ನವೆಂಬರ್ 2020, 9:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಾಹಿನಿಯೊಂದರ ಜನಪ್ರಿಯ ‘ಕೌನ್‌ ಬನೇಗಾ ಕರೋಡಪತಿ(ಕೆಬಿಸಿ)‘ ಕಾರ್ಯಕ್ರಮದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಪ್ರಶ್ನೆಯೊಂದನ್ನು ಕೇಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರೊಬ್ಬರು ನಿರೂಪಕರಾದ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಮತ್ತು ಕಾರ್ಯಕ್ರಮ ಪ್ರಸಾರ ಮಾಡಿರುವ ವಾಹಿನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಲಾತೂರ್ ಜಿಲ್ಲೆಯ ಔಸಾ ಕ್ಷೇತ್ರದ ಶಾಸಕ ಅಭಿಮನ್ಯು ಪವಾರ್‌ ಅವರು ಅಮಿತಾಭ್‌ ಮತ್ತು ಸೋನಿ ಎಂಟರ್‌ಟೇನ್‌ಮೆಂಟ್‌ ಟೆಲಿವಿಷನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದುಲಾತೂರ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌ ಪಿಂಗಳೆ ಅವರಿಗೆ ದೂರು ಸಲ್ಲಿಸಿದ್ದಾರೆ. ಕಳೆದ ಶುಕ್ರವಾರ ಪ್ರಸಾರವಾದ ‘ಕರ್ಮವೀರ್‌’ ವಿಶೇಷ ಎಪಿಸೋಡ್‌ನಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಸಂಬಂಧಿಸಿ ಅವರು ಆಕ್ಷೇಪ ಎತ್ತಿದ್ದಾರೆ.

‘ಹಿಂದೂಗಳನ್ನು ನೋಯಿಸುವ ಯತ್ನ ನಡೆದಿದೆ. ಸೌಹಾರ್ದದಿಂದ ಇರುವ ಹಿಂದೂ ಮತ್ತು ಬೌದ್ಧರ ನಡುವೆ ಸಾಮರಸ್ಯ ಕೆಡಿಸುವ ಉದ್ದೇಶ ಇದರ ಹಿಂದಿದೆ’ ಎಂದು ಪವಾರ್‌ ಪೊಲೀಸ್‌ ಅಧಿಕಾರಿಗೆ ನೀಡಿರುವ ಎರಡು ಪುಟಗಳ ಪತ್ರದಲ್ಲಿ ದೂರಿದ್ದಾರೆ. ಇದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಆ ವಿಶೇಷ ಎಪಿಸೋಡ್‌ನಲ್ಲಿ ಅಮಿತಾಭ್‌ ಎದುರು ಹಾಟ್‌ಸೀಟ್‌ನಲ್ಲಿ ಸಾಮಾಜಿಕ ಕಾರ್ಯಕರ್ತರಾದ ಬೆಜವಾಡ ವಿಲ್ಸನ್‌ ಮತ್ತು ಅನೂಪ್‌ ಸೋನಿ ಕುಳಿತಿದ್ದರು. ಅವರಿಗೆ ‘1927ರ ಡಿಸೆಂಬರ್‌ 25ರಂದು ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಅವರ ಅನುಯಾಯಿಗಳು ಯಾವ ಗ್ರಂಥವನ್ನು ಸುಟ್ಟುಹಾಕಿದ್ದರು?’ ಎಂಬ ಪ್ರಶ್ನೆ ಕೇಳಲಾಗಿತ್ತು. (ಎ) ವಿಷ್ಣು ಪುರಾಣ (ಬಿ) ಭಗವದ್ಗೀತೆ (ಸಿ) ಋಗ್ವೇದ ಮತ್ತು (ಡಿ) ಮನುಸ್ಮೃತಿ ಎಂಬ ನಾಲ್ಕು ಆಯ್ಕೆಗಳನ್ನು ಮುಂದಿಡಲಾಗಿತ್ತು. ₹ 6.40 ಲಕ್ಷ ಬಹುಮಾನದ ಪ್ರಶ್ನೆ ಇದಾಗಿತ್ತು.

ಉತ್ತರ ಹೇಳುವ ಸಂದರ್ಭದಲ್ಲಿ ಬಚ್ಚನ್‌, ‘ಪುರಾತನ ಹಿಂದೂ ಧರ್ಮಗ್ರಂಥ ಮನುಸ್ಮೃತಿಯಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಸೈದ್ಧಾಂತಿಕವಾಗಿ ಸಮರ್ಥಿಸಲಾಗಿದೆ ಎಂದು ಖಂಡಿಸಿ 1927ರಲ್ಲಿ ಅಂಬೇಡ್ಕರ್‌ ಅವರು ಅದರ ಪ್ರತಿಗಳನ್ನು ಸುಟ್ಟುಹಾಕಿದ್ದರು’ ಎಂದು ಹೇಳಿದ್ದಾಗಿ ಪವಾರ್‌ ಈ ದೂರಿನಲ್ಲಿ ತಿಳಿಸಿದ್ದಾರೆ.

‘ಈ ಪ್ರಶ್ನೆ, ಹಿಂದೂ ಧರ್ಮಗ್ರಂಥಗಳು ಇರುವುದು ಸುಡಲಿಕ್ಕಾಗಿ ಎಂಬ ಸಂದೇಶವನ್ನು ಸಾರುತ್ತದೆ. ಹಿಂದೂಗಳು ಮತ್ತು ಬೌದ್ಧರ ನಡುವೆ ದ್ವೇಷದ ಭಾವನೆ ಮೂಡಿಸುತ್ತದೆ‘ ಎಂದು ಪವಾರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ನೀಡಿರುವ ಅಭಿಮನ್ಯು ಪವಾರ್‌, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ.

ಕೆಬಿಸಿ ಕಾರ್ಯಕ್ರಮದ ವಿಶೇಷ ಕಂತಿನಲ್ಲಿ ಕೇಳಿದ ಈ ಪ್ರಶ್ನೆ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ‘ಈ ಕಾರ್ಯಕ್ರಮ ಎಡಪಂಥೀಯ ವಾದವನ್ನು ಹರಡಲು ಪ್ರಯತ್ನಿಸುತ್ತಿದೆ‘ ಎಂದು ದೂರಿದ್ದರು. ಇನ್ನು ಕೆಲವರು ‘ಇದು ಹಿಂದೂಗಳ ಭಾವನೆ ನೋಯಿಸುವಂತಿದೆ‘ ಎಂದಿದ್ದರು.

ಈ ಎಪಿಸೋಡ್‌ನ ದೃಶ್ಯದ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರ ನಿರ್ಮಾಪಕ ವಿವೇಕ್‌ ಅಗ್ನಿಹೋತ್ರಿ, ‘ಕೆಬಿಸಿಯನ್ನು ಕಮ್ಯುನಿಸ್ಟರು ಹೈಜಾಕ್‌ ಮಾಡಿದ್ದಾರೆ‘ ಎಂದು ಪ್ರತಿಕ್ರಿಯಿಸಿದ್ದರು. ‘ಅಮಾಯಕ ಮಕ್ಕಳೇ, ಸಾಂಸ್ಕೃತಿಕ ಹೋರಾಟವನ್ನು ಹೇಗೆ ಗೆಲ್ಲಲಾಗುತ್ತದೆ ಎಂಬುದನ್ನು ಇಲ್ಲಿ ಕಲಿಯಿರಿ. ಇದನ್ನು ಕೋಡಿಂಗ್‌ ಅನ್ನುತ್ತಾರೆ’ ಎಂದು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.