ADVERTISEMENT

‘ಚೌಕೀದಾರನ’ ಕೈಗೆ ರಾಜೀನಾಮೆ ಪತ್ರ ಕೊಟ್ಟ ಬಿಜೆಪಿ ಸಂಸದ

ಅಂಶುಲ್ ವರ್ಮಾ ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 18:40 IST
Last Updated 27 ಮಾರ್ಚ್ 2019, 18:40 IST
ಅಂಶುಲ್ ವರ್ಮಾ
ಅಂಶುಲ್ ವರ್ಮಾ   

ಲಖನೌ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಬೇಸರಗೊಂಡಿದ್ದ ಹರ್ದೋಯಿ ಕ್ಷೇತ್ರದ ಬಿಜೆಪಿ ಸಂಸದ‌ಅಂಶುಲ್ ವರ್ಮಾ ಬುಧವಾರ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಸೇರ್ಪಡೆಯಾಗಿದ್ದಾರೆ.

ತಮ್ಮ ಅಸಮಾಧಾನವನ್ನು ವಿನೂತನ ರೀತಿಯಲ್ಲಿ ವ್ಯಕ್ತಪಡಿಸಿರುವ ಅವರು, ರಾಜೀನಾಮೆ ಪತ್ರವನ್ನು ಬಿಜೆಪಿ ಕಚೇರಿಯ ಚೌಕೀದಾರನ (ಕಾವಲುಗಾರನ) ಕೈಗೆ ನೀಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ‘ಮೈ ಭಿ ಚೌಕೀದಾರ್’ ಅಭಿಯಾನದ ವಿರುದ್ಧ ಪ್ರತಿಭಟನೆ ದಾಖಲಿಸಿದ್ದಾರೆ.

ಕಾವಲುಗಾರನ ಕೈಗೆ ನೂರು ರೂಪಾಯಿಯ ನೋಟನ್ನೂ ನೀಡಿದ ಅವರು, ರಾಜೀನಾಮೆ ಪತ್ರವನ್ನು ಸಂಬಂಧಪಟ್ಟವರಿಗೆ ತಲುಪಿಸುವಂತೆ ಸೂಚಿಸಿದ್ದಾರೆ.

ADVERTISEMENT

‘ದಲಿತ ಎಂಬ ಕಾರಣಕ್ಕೆ ನನಗೆ ಟಿಕೆಟ್ ನಿರಾಕರಿಸಲಾಗಿದೆ. ಇದೇ ಕಾರಣಕ್ಕೆ ಆರು ದಲಿತ ಸಂಸದರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಬಿಜೆಪಿಯಲ್ಲಿ ದಲಿತರು ಮೌಲ್ಯ ಕಳೆದುಕೊಂಡಿದ್ದಾರೆ ಎಂಬುದು ಇದರ ಅರ್ಥ’ ಎಂದು ಅಂಶುಲ್ ಆರೋಪಿಸಿದ್ದಾರೆ.

ಯಾವುದೇ ಷರತ್ತುಗಳಿಲ್ಲದೇ ಎಸ್‌ಪಿ ಸೇರಿದ್ದೇನೆ ಎಂದುಅಖಿಲೇಶ್ ಯಾದವ್ ಸಮ್ಮುಖದಲ್ಲಿ ಅಂಶುಲ್ ಹೇಳಿದರು. ‘ನನ್ನ ಹೆಸರಿನ ಹಿಂದೆ ಚೌಕೀದಾರ್ ಎಂದು ಸೇರಿಸಿಕೊಳ್ಳದ ಕಾರಣಕ್ಕೂ ಟಿಕೆಟ್ ನಿರಾಕರಿಸಿರಬಹುದು. ಇದರಿಂದ ತುಂಬಾ ಬೇಸರವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರವನ್ನೂ ಬರೆದಿದ್ದೇನೆ’ ಎಂದು ಎಸ್‌ಪಿ ಕಚೇರಿಯಲ್ಲಿ ಅವರು ಹೇಳಿದರು.

ಹರ್ದೋಯಿ ಕ್ಷೇತ್ರದಲ್ಲಿ ಜೈಪ್ರಕಾಶ್ ರಾವತ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.