
ಜೈಪುರ: ರಾಜಸ್ಥಾನದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿರುವ 4000–5000ದಷ್ಟು ಮತದಾರರ ಹೆಸರನ್ನು ಅಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಡೊಟಾಸ್ರಾ ಬುಧವಾರ ಆರೋಪಿಸಿದ್ದಾರೆ. ಅದಕ್ಕಾಗಿಯೇ ಮುಖ್ಯಮಂತ್ರಿ ನಿವಾಸದಿಂದ ಕ್ಷೇತ್ರವಾರು ದತ್ತಾಂಶವಿರುವ ಪೆನ್ ಡ್ರೈವ್ ಅನ್ನು ಬಿಜೆಪಿ ನಾಯಕರಿಗೆ ಹಂಚಲಾಗಿದೆ ಎಂದು ಅವರು ದೂರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಕಡಿತ ಮಾಡುವ ಉದ್ದೇಶದಿಂದ ಮೋದಿ ಸರ್ಕಾರ ಮತ್ತು ಬಿಜೆಪಿ ದೊಡ್ಡ ಪ್ರಮಾಣದ ಯೋಜಿತ ಪಿತೂರಿ ನಡೆಸಿದೆ ಎಂಬ ಗಂಭೀರ ಮಾಹಿತಿ ಬೆಳಕಿಗೆ ಬಂದಿದೆ ಎಂದೂ ಅವರು ಆರೋಪಿಸಿದ್ದಾರೆ.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಜೈಪುರಕ್ಕೆ ಭೇಟಿ ನೀಡಿದ ನಂತರ ಈ ದತ್ತಾಂಶವನ್ನು ಒದಗಿಸಲಾಗಿದ್ದು, ಬಿಜೆಪಿ ನಾಯಕರ ನಡುವೆ ಇದನ್ನು ಹಂಚಲಾಗಿದೆ’ ಎಂದು ಅವರು ಹೇಳಿದ್ದು, ಈ ಬಗ್ಗೆ ಪಕ್ಷದ ಕಾರ್ಯಕರ್ತರು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ್ದಾರೆ.
‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ ಜನವರಿ 15ರಂದು ಅಂತಿಮ ಆಕ್ಷೇಪಣೆ ಗಡುವಿಗೆ ಮುಂಚಿತವಾಗಿ, ಕಾಂಗ್ರೆಸ್ ಮತಗಳನ್ನು ಅಳಿಸಲು ಅನುಕೂಲವಾಗುವಂತೆ ಉಪವಿಭಾಗಾಧಿಕಾರಿ (ಎಸ್‌ಡಿಒ) ಕಚೇರಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸಮೂನೆಗಳನ್ನು ಸಲ್ಲಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.