ADVERTISEMENT

ವೋಟ್‌ಜಿಹಾದ್, ಧರ್ಮಯುದ್ಧ ಘೋಷಣೆಗಳಿಂದ ಮತ ಧ್ರುವೀಕರಣ ಅಸಾಧ್ಯ: ಸಚಿನ್ ಪೈಲಟ್

ಪಿಟಿಐ
Published 17 ನವೆಂಬರ್ 2024, 15:21 IST
Last Updated 17 ನವೆಂಬರ್ 2024, 15:21 IST
ಸಚಿನ್‌ ಪೈಲಟ್
ಸಚಿನ್‌ ಪೈಲಟ್   

ಪುಣೆ: ‘ಬಟೇಂಗೆ ತೋ ಕಾಟೇಂಗೆ’ (ಒಗ್ಗಟ್ಟಿನಿಂದ ಇರದಿದ್ದರೆ ವಿನಾಶವಾಗುತ್ತೇವೆ), ‘ವೋಟ್ ಜಿಹಾದ್‌’ ಮಾತುಗಳಿಂದ ವೋಟುಗಳ ಧ್ರುವೀಕರಣಕ್ಕೆ ಬಿಜೆಪಿ ಯತ್ನಿಸುತ್ತಿದೆ. ಆದರೆ, ಜನರಿಗೆ ಈ ಹುನ್ನಾರ ಅರ್ಥವಾಗಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹೇಳಿದ್ದಾರೆ.    

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾವಿಕಾಸ ಆಘಾಡಿಯ ವೋಟುಗಳನ್ನು ವಿಭಜಿಸಲು ಬಿಜೆಪಿಯು ಸಣ್ಣ ಪಕ್ಷಗಳನ್ನು ಮುನ್ನೆಲೆಗೆ ತಂದಿದೆ. ಬಿಜೆಪಿಯ ಈ ಯೋಜನೆಯೂ ಈ ಬಾರಿ ಫಲ ನೀಡುವುದಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಸ್ಥಾನದಲ್ಲಿರುವ ಯೋಗಿ ಆದಿತ್ಯನಾಥ ಅವರು ‘ಬಟೇಂಗೆ ತೋ ಕಾಟೇಂಗೆ’ ಅಂತಹ ಹೇಳಿಕೆ ನೀಡಬಾರದಿತ್ತು. ಅದರ ಬದಲಾಗಿ ‘ಪಢೋಗೆ ತೋ ಬಡೋಗೆ’ (ಓದಿದರೆ ಉದ್ಧಾರವಾಗುವಿರಿ) ಎಂದು ಅವರು ಹೇಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ADVERTISEMENT

‘ವೋಟ್ ಜಿಹಾದ್’ ಹೇಳಿಕೆ ಉಲ್ಲೇಖಿಸಿದ ಅವರು, ಧರ್ಮದ ಆಧಾರದಲ್ಲಿ ಎಲ್ಲಿಯವರೆಗೆ ರಾಜಕಾರಣ ಮಾಡುತ್ತೀರಿ ಎಂದು ಪ್ರಶ್ನಿಸಿದರು. ರಾಮಮಂದಿರ ನಿರ್ಮಿಸಿದ್ದ ಅಯೋಧ್ಯೆಯಲ್ಲಿಯೇ ಬಿಜೆಪಿ ಸೋತಿದೆ. ಧ್ರುವೀಕರಣ ಆಗುತ್ತಿದೆ, ಆದರೆ, ಜನರಿಗೂ ಅರ್ಥವಾಗುತ್ತಿದೆ ಎಂದರು.

ಯೋಗಿ ಆದಿತ್ಯನಾಥ ಮತ್ತು ದೇವೇಂದ್ರ ಫಡಣವೀಸ್‌ ಅವರು ಬಳಸುತ್ತಿರುವ ಭಾಷೆ ಅನಗತ್ಯವಾದುದು. ಜನರನ್ನು ಪ್ರಚೋದಿಸುವ ಇಂಥ ಹೇಳಿಕೆಗಳನನ್ನು ಚುನಾವಣಾ ಆಯೋಗ ಗಮನಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.