ADVERTISEMENT

ಪಂಜಾಬ್ ಅತ್ಯಾಚಾರ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸುತ್ತಿದೆ: ಕಾಂಗ್ರೆಸ್

ಪಿಟಿಐ
Published 24 ಅಕ್ಟೋಬರ್ 2020, 16:50 IST
Last Updated 24 ಅಕ್ಟೋಬರ್ 2020, 16:50 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಹೋಶಿಯಾರ್‌ಪುರದ ಅತ್ಯಾಚಾರ ಸಂತ್ರಸ್ತೆಯ ವಿಚಾರದಲ್ಲಿ ಬಿಜೆಪಿಯು ಅಸೂಕ್ಷ್ಮತೆಯನ್ನು ಪ್ರದರ್ಶಿಸುತ್ತಿದೆ ಮತ್ತು ಬಿಹಾರ ಚುನಾವಣೆ ಅಂಗವಾಗಿ ಆಡಳಿತ ಪಕ್ಷವು ಈ ವಿಚಾರವನ್ನು ರಾಜಕೀಯಗೊಳಿಸುತ್ತಿದೆ ಎಂದು ಶನಿವಾರ ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಉತ್ತರ ಪ್ರದೇಶ ಸರ್ಕಾರದಂತೆ ಪಂಜಾಬ್ ಮತ್ತು ರಾಜಸ್ಥಾನ ಸರ್ಕಾರಗಳು ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದನ್ನು ನಿರಾಕರಿಸುತ್ತಿಲ್ಲ, ಆಕೆಯ ಕುಟುಂಬಕ್ಕೆ ಬೆದರಿಕೆ ಮತ್ತು ನ್ಯಾಯ ಸಿಗದಂತೆ ತಡೆಯೊಡ್ಡುತ್ತಿಲ್ಲ. ಒಂದು ವೇಳೆ ಅವರು ಹಾಗೆ ಮಾಡಿದರೆ ನಾನೇ ಅಲ್ಲಿಗೆ ತೆರಳಿ ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಉನ್ನತ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್, ಪ್ರಕಾಶ್ ಜಾವಡೇಕರ್ ಮತ್ತು ಹರ್ಷ್‌ವರ್ಧನ್ ಅವರು ಹಾಥರಸ್ ಸಾಮೂಹಿಕ ಅತ್ಯಾಚಾರ ಘಟನೆಯ ಸಮಯದಲ್ಲಿ ಎಲ್ಲಿದ್ದರು ಎಂದು ಪ್ರಶ್ನಿಸಿರುವ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್, ಬಿಹಾರದಲ್ಲಿ ರಾಜಕೀಯ ಲಾಭಕ್ಕಾಗಿ ಪಂಜಾಬ್ ಅತ್ಯಾಚಾರ ಪ್ರಕರಣವನ್ನು ಮಾತ್ರ ಎತ್ತಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ನಿರ್ಮಲಾ ಸೀತಾರಾಮನ್ ಅವರು ಈ ರೀತಿಯ ಸೂಕ್ಷ್ಮ ವಿಚಾರದಲ್ಲಿ ಅಸೂಕ್ಷ್ಮತೆ ಪ್ರದರ್ಶಿಸುವುದನ್ನು ನಿಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ವಿಚಾರವನ್ನು ರಾಜಕೀಯಗೊಳಿಸದಿರಿ. ಬಿಹಾರದ ಚುನಾವಣೆಯಿರುವುದರಿಂದ ನಿಮ್ಮ ಗಾಢ ನಿದ್ರೆಯಿಂದ ನೀವು ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದೀರಿ ಎಂಬುದನ್ನು ಇಡೀ ರಾಷ್ಟ್ರವೇ ಅರ್ಥಮಾಡಿಕೊಂಡಿದೆ.

ನಿಮ್ಮ ಪಕ್ಷ, ನಿಮ್ಮ ನಾಯಕರು, ನಿಮ್ಮ ಪ್ರಧಾನಮಂತ್ರಿ ಚುನಾವಣೆಗಳನ್ನು ಮೀರಿ ಯಾವುದೇ ವಿಚಾರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಮತ್ತು ಅದಕ್ಕಾಗಿಯೇ ಇದ್ದಕ್ಕಿದ್ದಂತೆ ನೀವು ಹೋಶಿಯಾರ್‌ಪುರವನ್ನು ಸಮಸ್ಯೆಯನ್ನಾಗಿ ಮಾಡಲು ನಿರ್ಧರಿಸಿದ್ದೀರಿ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಮತ್ತು ಡಿಜಿಪಿ ಈ ವಿಚಾರವನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದಾರೆ ಮತ್ತು ಸಂತ್ರಸ್ತೆಯ ಕುಟುಂಬದೊಂದಿಗೆ ನಿಲ್ಲುವುದರ ಜೊತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಏಕೆ ಹಾಥರಸ್‌ಗೆ ಭೇಟಿ ನೀಡಿದಂತೆ ಹೋಷಿಯಾರ್‌ಪುರಕ್ಕೆ ಭೇಟಿ ನೀಡಿಲ್ಲ ಎನ್ನುವ ಬಿಜೆಪಿ ಪ್ರಶ್ನೆಗೆ ಉತ್ತರಿಸಿದ ದೇವ್, ಉತ್ತರ ಪ್ರದೇಶ ಸರ್ಕಾರ ಮಾಡಿದಂತೆ ಸಂತ್ರಸ್ತೆಯ ಕುಟುಂಬಕ್ಕೆ ಪಂಜಾಬ್ ಸರ್ಕಾರ ಬೆದರಿಕೆ ಹಾಕಿದೆ ಎಂದು ಯಾರಾದರೂ ಆರೋಪಿಸಬಹುದೇ ಎಂದು ಕೇಳಿದ್ದಾರೆ.

'ಪ್ರತಿಪಕ್ಷ ನಾಯಕರು ಹಾಥರಸ್‌ಗೆ ಭೇಟಿ ನೀಡಬೇಕು ಎಂದುಕೊಂಡಿದ್ದು ಮತ್ತು ಪಂಜಾಬ್‌ಗೆ ಏಕೆ ಭೇಟಿ ನೀಡಿಲ್ಲ ಎನ್ನುವುದಕ್ಕೆ ಎಂದು ಭಾವಿಸಲು ಮತ್ತೊಂದು ಕಾರಣವೆಂದರೆ ಉತ್ತಪ ಪ್ರದೇಶದ ಹೆಚ್ಚುವರಿ ಮಹಾನಿರ್ದೇಶಕರು ಹಾಥರಸ್ ಪ್ರಕರಣದಲ್ಲಿ ಅತ್ಯಾಚಾರವಾಗಿಲ್ಲ ಎಂದು ಹೇಳಿದ್ದರು. ಪಂಜಾಬ್ ಪೊಲೀಸರು ಅಥವಾ ಪಂಜಾಬ್‌ನ ಯಾವುದೇ ಪೊಲೀಸ್ ಅಧಿಕಾರಿ ಅತ್ಯಾಚಾರ ನಡೆದಿದೆ ಎನ್ನುವುದನ್ನು ನಿರಾಕರಿಸುತ್ತಿದ್ದಾರೆ ಎಂದು ಯಾರಾದರೂ ಹೇಳಬಹುದೇ? ಈಗಾಗಲೇ ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇಷ್ಟು ಕ್ರೂರವಾಗಿ ಕೊಲ್ಲಲ್ಪಟ್ಟ ಹಾಥರಸ್‌ನ ಸಂತ್ರಸ್ತೆಯ ವಿಚಾರದಲ್ಲಿ ಆರೋಪಿಗಳೊಂದಿಗೆ ಬಿಜೆಪಿ ನಾಯಕರು ರ್ಯಾಲಿ ಮಾಡುವಾಗ ನಿರ್ಮಲಾ ಸೀತಾರಾಮನ್ ಜಿ ಎಲ್ಲಿದ್ದಿರಿ? ನೀವು ಯಾಕೆ ಮೌನವಾಗಿದ್ದಿರಿ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.