ಮಲ್ಲಿಕಾರ್ಜುನ ಖರ್ಗೆ
(ಪಿಟಿಐ ಚಿತ್ರ)
ಮೂರು ಮಸೂದೆಗಳ ಅಂಗೀಕಾರಕ್ಕೆ ಸ್ಪಷ್ಟ ಬಹುಮತ ಇಲ್ಲ | ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವ ಸಾಧ್ಯತೆ | 193 ನಾಯಕರ ವಿರುದ್ಧ ಇ.ಡಿ ಪ್ರಕರಣ ದಾಖಲು
ನವದೆಹಲಿ: ‘ಮತ ಕಳ್ಳತನದ ಬಳಿಕ ಈಗ ಅಧಿಕಾರ ಕಳ್ಳತನಕ್ಕೆ ಬಿಜೆಪಿ ಮುಂದಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಮಧ್ಯಪ್ರದೇಶ ಹಾಗೂ ಹರಿಯಾಣದ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ನೂತನವಾಗಿ ನೇಮಕಗೊಂಡ ಅಧ್ಯಕ್ಷರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ‘ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಜ್ಯ ಹಾಗೂ ಕೇಂದ್ರ ಸಚಿವರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಸತತ 30 ದಿನಗಳವರೆಗೆ ಜೈಲಿನಲ್ಲಿದ್ದರೆ ಅವರನ್ನು ಪದಚ್ಯುತಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ಸೇರಿದಂತೆ ಮೂರು ಮಸೂದೆಗಳ ಜಾರಿಯು ‘ಪ್ರಜಾಪ್ರಭುತ್ವದ ಮೇಲೆ ಬುಲ್ಡೋಜರ್ ಹರಿಸಿದಂತೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಸರ್ಕಾರ ರಚಿಸುವ ಅಥವಾ ತೆಗೆದುಹಾಕುವ ಜನರ ಹಕ್ಕನ್ನು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐನಂತಹ ಸಂಸ್ಥೆಗಳಿಗೆ ಬಿಜೆಪಿ ಹಸ್ತಾಂತರಿಸಿದೆ' ಎಂದು ದೂರಿದ್ದಾರೆ.
‘ಸಂವಿಧಾನ (130ನೇ ತಿದ್ದುಪಡಿ) ಮಸೂದೆ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು– ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆಗಳನ್ನು ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಇಲ್ಲದಿದ್ದರೂ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಕಳೆದ ಬುಧವಾರ ಮಂಡಿಸಿದೆ’ ಎಂದು ಹೇಳಿದ್ದಾರೆ.
‘ಸಂವಿಧಾನ (130ನೇ ತಿದ್ದುಪಡಿ) ಮಸೂದೆ ಮೂಲಕ ಬಿಜೆಪಿಯು ವಿರೋಧ ಪಕ್ಷಗಳ ಸರ್ಕಾರಗಳನ್ನು 30 ದಿನಗಳೊಳಗೆ ಅಸ್ಥಿರಗೊಳಿಸಬಹುದು. ಬಂಧನವನ್ನೇ ಅಸ್ತ್ರವಾಗಿಸಿಕೊಂಡು ಪ್ರಜಾಪ್ರಭುತ್ವವನ್ನೇ ಅಸ್ಥಿರಗೊಳಿಸಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ವಿರೋಧ ಪಕ್ಷಗಳ 193 ನಾಯಕರು ಇ.ಡಿ ಪ್ರಕರಣಗಳನ್ನು ಎದುರಿಸುತ್ತಿದ್ದು, ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಮುಖ್ಯಮಂತ್ರಿಗಳು, ಮಂತ್ರಿಗಳನ್ನು ಬಂಧಿಸಿ ತಿಂಗಳುಗಟ್ಟಲೇ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ, ಈ ಪ್ರಕರಣಗಳಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ತನಿಖಾ ಸಂಸ್ಥೆಗಳು ಹೇಳುತ್ತಿವೆ’ ಎಂದು ದೂರಿದ್ದಾರೆ.
‘ಭ್ರಷ್ಟರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವ ಮೋದಿ’
‘ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕುರಿತು ಮಾತನಾಡುತ್ತಾರೆ. ಆದರೆ ಮೋದಿ ಅವರು ಯಾರನ್ನು ಭ್ರಷ್ಟ ಎಂದು ಕರೆದಿದ್ದರೋ ಅದೇ ನಾಯಕರನ್ನು ತಮ್ಮ ಪಕ್ಷ ಹಾಗೂ ಸರ್ಕಾರಕ್ಕೆ ಸೇರಿಸಿಕೊಂಡಿದ್ದಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಚುನಾವಣಾ ಬಾಂಡ್‌ಗಳ ರದ್ದತಿಯನ್ನು ಉಲ್ಲೇಖಿಸಿದ ಖರ್ಗೆ ‘ಈ ಪ್ರಕರಣದಲ್ಲಿ ತನಿಖೆ ನಡೆದಿಲ್ಲ. ಪಿಎಂ ಕೇರ್ಸ್‌ಗೆ ಯಾರು ಯಾವ ಕಾರಣಕ್ಕಾಗಿ ಹಣ ನೀಡಿದ್ದರು ಎಂಬುದು ಇನ್ನೂ ಗೊತ್ತಾಗಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.