ADVERTISEMENT

ಅನೇಕರಿಗೆ ಕುಟುಂಬವೇ ಪಕ್ಷ, ಬಿಜೆಪಿಗೆ ಪಕ್ಷವೇ ಕುಟುಂಬ: ಜೆ.ಪಿ.ನಡ್ಡಾ

ಕಾಂಗ್ರೆಸ್ಸನ್ನು ಗುರಿಯಾಗಿಸಿ ಟೀಕೆ

ಏಜೆನ್ಸೀಸ್
Published 17 ಅಕ್ಟೋಬರ್ 2020, 9:53 IST
Last Updated 17 ಅಕ್ಟೋಬರ್ 2020, 9:53 IST
ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ (ಸಂಗ್ರಹ ಚಿತ್ರ)
ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ (ಸಂಗ್ರಹ ಚಿತ್ರ)   

ನವದೆಹಲಿ: ‘ಅನೇಕ ಪಕ್ಷಗಳಿವೆ, ಅಲ್ಲಿ ಒಂದು ಕುಟುಂಬವೇ ಪಕ್ಷವಾಗಿರುತ್ತದೆ. ಆದರೆ, ಬಿಜೆಪಿ ವಿಚಾರದಲ್ಲಿ ಹಾಗಲ್ಲ. ಇಲ್ಲಿ ಇಡೀ ಪಕ್ಷವೇ ಒಂದು ಕುಟುಂಬ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಉತ್ತರಾಖಂಡ ಬಿಜೆಪಿ ಕಚೇರಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಪಕ್ಷದ ಕಚೇರಿಯು ಕಾರ್ಯಕರ್ತರಿಗೆ ಮೌಲ್ಯ ನೀಡುತ್ತದೆ ಎಂದಿದ್ದಾರೆ.

‘ಪಕ್ಷದ ಕಚೇರಿಯು ನಾಯಕನೊಬ್ಬನ ಮನೆಯಿಂದ ನಡೆಯುವುದಾದರೆ ಪಕ್ಷವು ವ್ಯಕ್ತಿಗೆ ಸೇರಿದ್ದಾಗುತ್ತದೆ. ಇತರ ಪಕ್ಷಗಳಲ್ಲಿ ನೀವದನ್ನು ನೋಡಿದ್ದೀರಿ. ಅಂತಹ ಕಡೆ ಕುಟುಂಬವೇ ಪಕ್ಷವಾಗಿರುತ್ತದೆ. ಆದರೆ ನಮ್ಮಲ್ಲಿ, ಪಕ್ಷವೇ ನಮ್ಮ ಪರಿವಾರ (ಕುಟುಂಬ) ಆಗಿದೆ’ ಎಂದು ಕಾಂಗ್ರೆಸ್ಸನ್ನು ಗುರಿಯಾಗಿಸಿ ನಡ್ಡಾ ಹೇಳಿದ್ದಾರೆ.

‘ದೇಶದಲ್ಲಿರುವ ಇತರ ಪಕ್ಷಗಳನ್ನು ಗಮನಿಸಿ. ಅವುಗಳು ಕುಟುಂಬಕ್ಕೆ ಸೀಮಿತಗೊಂಡಿವೆ. ಅದು ಕಾಂಗ್ರೆಸ್ ಇರಬಹುದು ಅಥವಾ ಇತರ ಯಾವುದೇ ಪ್ರಾದೇಶಿಕ ಪಕ್ಷಗಳಾಗಿರಬಹುದು. ಆ ಪಕ್ಷದವರೆಲ್ಲ ತಮ್ಮ ಸಹೋದರರನ್ನು, ಸಹೋದರಿಯರನ್ನು, ತಾಯಿ, ಮಕ್ಕಳನ್ನು ರಕ್ಷಿಸುತ್ತಿವೆ. ಅಳಿಯಂದಿರೊಂದಿಗೆ ರಹಸ್ಯವಾಗಿ ಕಾರ್ಯಾಚರಿಸುತ್ತಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.