ADVERTISEMENT

ನಿಮ್ಮ ವರ್ತನೆಯಿಂದ ಆಘಾತವಾಗಿದೆ: ಪಕ್ಷದ ಶಾಸಕನಿಗೆ ಎಚ್ಚರಿಕೆ ನೀಡಿದ BJP ಅಧ್ಯಕ್ಷ

ಪಿಟಿಐ
Published 22 ಮಾರ್ಚ್ 2025, 11:38 IST
Last Updated 22 ಮಾರ್ಚ್ 2025, 11:38 IST
   

ಗುವಾಹಟಿ: ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರನ್ನು ನಿಂದಿಸಿದ್ದಕ್ಕಾಗಿ ರಾಜ್ಯದ ಜನರ ಕ್ಷಮೆ ಕೋರುವಂತೆ ತಮ್ಮ ಪಕ್ಷದ ಶಾಸಕ ರುಪ್‌ಜ್ಯೋತಿ ಕುರ್ಮಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಶನಿವಾರ ಸೂಚಿಸಿದ್ದಾರೆ.

ಕುರ್ಮಿ ಅವರಿಗೆ ಪತ್ರ ಬರೆದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್‌ ಸೈಕಿಯಾ, ವಿಧಾನಸಭೆಯಲ್ಲಿ ಶುಕ್ರವಾರ ತಾವು (ರುಪ್‌ಜ್ಯೋತಿ ಕುರ್ಮಿ) ನಡೆದುಕೊಂಡ ರೀತಿ ಪ್ರಜಾಸತ್ತಾತ್ಮಕ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಎಚ್ಚರಿಸಿದ್ದಾರೆ.

ಜೊರ್ಹಾತ್‌ ಜಿಲ್ಲೆಯ ಮರಿಯಾನಿ ವಿಧಾನಸಭಾ ಕ್ಷೇತ್ರದ ಶಾಸಕ ಕುರ್ಮಿ, ಸದನದಲ್ಲಿ ಚರ್ಚೆಯ ವೇಳೆ ವಿರೋಧ ಪಕ್ಷಗಳ ಶಾಸಕರೊಂದಿಗೆ ಶುಕ್ರವಾರ ವಾಗ್ವಾದ ನಡೆಸಿದ್ದರು. ಈ ವೇಳೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದರು. ನಂತರ ಅವುಗಳನ್ನು ಕಡತದಿಂದ ತೆಗೆಯಲಾಯಿತು.

ADVERTISEMENT

ಕುರ್ಮಿ ವರ್ತನೆಯನ್ನು ಟೀಕಿಸಿರುವ ಸೈಕಿಯಾ, 'ಹಿರಿಯ ರಾಜಕಾರಣಿಯಾಗಿ ನಿಮ್ಮ ವರ್ತನೆಯನ್ನು ಕಂಡು ಬಿಜೆಪಿಯ ಸದಸ್ಯರಾಗಿ ನಮಗೆ ಆಘಾತವಾಗಿದೆ' ಎಂದು ಹೇಳಿದ್ದಾರೆ.

ಆದರ್ಶಗಳು ಮತ್ತು ಸಿದ್ದಾಂತಗಳಿಗೆ ದೃಢವಾಗಿ ನಿಲ್ಲುವ ಬಿಜೆಪಿಯು ಶಿಸ್ತು ಮತ್ತು ಸಹಿಷ್ಣುತೆಗೆ ಹೆಸರಾಗಿದೆ ಎಂಬುದನ್ನು ಒತ್ತಿ ಹೇಳಿರುವ ಅಧ್ಯಕ್ಷ, ಕುರ್ಮಿ ಅವರ ವರ್ತನೆ ಪಕ್ಷದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.

ಮತ್ತೊಮ್ಮೆ ಇಂತಹ ವರ್ತನೆ ಪುನರಾವರ್ತಿಸದಂತೆ ಮನವಿ ಮಾಡುವುದಾಗಿಯೂ ಹೇಳಿರುವ ಅವರು, 'ಇದೇ ವೇಳೆ, ಈ ವಿಚಾರವಾಗಿ ರಾಜ್ಯದ ಜನರ ಕ್ಷಮೆ ಕೋರುವಂತೆ ನಿಮಗೆ ನಿರ್ದೇಶಿಸುತ್ತಿದ್ದೇವೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕುರ್ಮಿ ಅವರು ತಮ್ಮ ವರ್ತನೆಗೆ ಸದನದಲ್ಲೇ ಕ್ಷಮೆ ಯಾಚಿಸಿದ್ದರು.

2006ರಿಂದ ಮರಿಯಾನಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕುರ್ಮಿ, 2021ರಲ್ಲಿ ಬಿಜೆಪಿಗೆ ಸೇರಿದ್ದಾರೆ. ಅದಕ್ಕೂ ಮೊದಲು ಅವರು ಕಾಂಗ್ರೆಸ್‌ನಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.