ADVERTISEMENT

ಬಿಜೆಪಿಯಿಂದ ರಾಹುಲ್‌ ಗಾಂಧಿ ಆ್ಯನಿಮೇಷನ್‌ ವಿಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 15:01 IST
Last Updated 16 ಅಕ್ಟೋಬರ್ 2022, 15:01 IST
ವಿಡಿಯೊದಲ್ಲಿನ ದೃಶ್ಯ
ವಿಡಿಯೊದಲ್ಲಿನ ದೃಶ್ಯ   

ನವದೆಹಲಿ:‘ಭಾರತ್‌ ಜೋಡೊ ಯಾತ್ರೆ’ ಕುರಿತು ವ್ಯಂಗ್ಯವಾಡಿರುವ ಬಿಜೆಪಿಯು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ರೇಖಾಚಿತ್ರದ (ಆ್ಯನಿಮೇಷನ್‌) ವಿಡಿಯೊವೊಂದನ್ನು ಭಾನುವಾರ ಬಿಡುಗಡೆ ಮಾಡಿದೆ. ಈ ವಿಡಿಯೊಗೆ ಕಾಂಗ್ರೆಸ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಎರಡು ನಿಮಿಷಗಳ ವಿಡಿಯೊ ಇದಾಗಿದ್ದು, ಶೋಲೆ ಚಿತ್ರದಲ್ಲಿ ನಟ ಗೋವರ್ಧನ್‌ ಅಸ್ರಾನಿ ಅವರು ನಿರ್ವಹಿಸಿದ್ದ ಪಾತ್ರದಂತೆ ರಾಹುಲ್‌ ಗಾಂಧಿ ಅವರನ್ನು ಬಿಂಬಿಸಲಾಗಿದೆ. ಗೋವಾದಲ್ಲಿ ಹಲವು ಶಾಸಕರು ಕಾಂಗ್ರೆಸ್‌ ತೊರೆದಿದ್ದು, ಹಲವು ಮುಖಂಡರು ಪಕ್ಷ ತೊರೆದು ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರು ಸ್ಥಾಪಿಸಿರುವ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ಮತ್ತು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಒಳಜಗಳಗಳ ಕುರಿತ ವ್ಯಂಗ್ಯವೂ ಈ ವಿಡಿಯೊದಲ್ಲಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಅವರನ್ನು ಉಲ್ಲೇಖಿಸಲಾಗಿರುವ ವಿಡಿಯೊಗೆ ‘ಅಮ್ಮ, ಈ ಸಂಕಟ ಏಕೆ ಮುಗಿಯುತ್ತಿಲ್ಲ? ಇದು ಮುಗಿದಿದೆ... ಟಾಟಾ.. ಗುಡ್‌ಬೈ’ ಎಂದು ಅಡಿಬರಹ ನೀಡಲಾಗಿದೆ.

ADVERTISEMENT

ಈ ವಿಡಿಯೊಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಸಂವಹನ ಉಸ್ತುವಾರಿ ಜೈರಾಮ್‌ ರಮೇಶ್‌, ‘ಭಾರತ್‌ ಜೋಡೊ ಯಾತ್ರೆ’ಯ ಯಶಸ್ಸನ್ನು ಅಣಕ ಮಾಡಲು ಬಿಜೆಪಿ ಕಂಡುಕೊಂಡಿರುವ ಹೊಸ ಅಸ್ತ್ರ ಇದು. ಹತಾಶೆ+ ಖಿನ್ನತೆ= ರೇಖಾಚಿತ್ರ. ಈ ನಡೆಯನ್ನು ‘ದಯನೀಯ’ ಎಂದು ಕರೆಯುವುದು ಅತ್ಯಂತ ಚಿಕ್ಕ ಪದವಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.