ADVERTISEMENT

SC ಕಾನೂನು ಮಾಡೋದಾದರೆ ಸಂಸತ್ ಮುಚ್ಚಿಬಿಡಿ: ಸಂಸದರ ಹೇಳಿಕೆಗೆ ನಡ್ಡಾ ಹೇಳಿದ್ದೇನು?

ಪಿಟಿಐ
Published 20 ಏಪ್ರಿಲ್ 2025, 4:34 IST
Last Updated 20 ಏಪ್ರಿಲ್ 2025, 4:34 IST
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ   

ನವದೆಹಲಿ: ಸುಪ್ರೀಂ ಕೋರ್ಟ್‌ ಕುರಿತಂತೆ ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರ ಟೀಕೆಗಳ ಬಗ್ಗೆ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಅವರ ಹೇಳಿಕೆಗಳು ವೈಯಕ್ತಿಕ ಎಂದು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ನ್ಯಾಯಾಂಗವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ ಎಂದಿರುವ ಅವರು, ಆಡಳಿತ ಪಕ್ಷಕ್ಕೆ ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ ಎಂದಿದ್ದಾರೆ.

‘ನ್ಯಾಯಾಂಗ ಮತ್ತು ಮುಖ್ಯ ನ್ಯಾಯಮೂರ್ತಿಗಳ ಕುರಿತು ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ನೀಡಿರುವ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆಗಳು . ಬಿಜೆಪಿ ಅದನ್ನು ಒಪ್ಪುವುದಿಲ್ಲ ಅಥವಾ ಅಂತಹ ಹೇಳಿಕೆಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ಪಕ್ಷ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ’ ಎಂದು ನಡ್ಡಾ ಅವರು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ನಾಯಕರು ಮತ್ತು ಪಕ್ಷದ ಇತರ ಸದಸ್ಯರು ಅಂತಹ ಹೇಳಿಕೆಗಳನ್ನು ನೀಡದಂತೆ ನಿರ್ದೇಶನ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಬಿಜೆಪಿ ಯಾವಾಗಲೂ ನ್ಯಾಯಾಂಗವನ್ನು ಗೌರವಿಸುತ್ತದೆ. ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳು ನಮ್ಮ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ ಎಂದು ಪಕ್ಷ ನಂಬುವುದರಿಂದ ಅವುಗಳ ಸಲಹೆಗಳು ಮತ್ತು ಆದೇಶಗಳನ್ನು ಸಂತೋಷದಿಂದ ಸ್ವೀಕರಿಸಿದೆ ಎಂದು ನಡ್ಡಾ ಹೇಳಿದ್ದಾರೆ.

‘ನ್ಯಾಯಾಂಗ ಸಂವಿಧಾನದ ರಕ್ಷಣೆಯ ಬಲವಾದ ಆಧಾರಸ್ತಂಭ’ಎಂದು ಅವರು ಹೇಳಿದ್ದಾರೆ.

ಸಂಸದರು ಹೇಳಿದ್ದೇನು?

ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸಬಹುದಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳನ್ನು ಮುಚ್ಚಬೇಕು ಎಂದು ಸಂಸದ ನಿಶಿಕಾಂತ್ ದುಬೆ ಹೇಳಿದ್ದರು. ದೇಶದಲ್ಲಿ ಅಂತರ್ಯುದ್ಧಗಳಿಗೆ ಸಿಜೆಐ ಖನ್ನಾ ಕಾರಣ ಎಂದೂ ದುಬೆ ಆರೋಪಿಸಿದ್ದರು.

ಉತ್ತರ ಪ್ರದೇಶದ ಮಾಜಿ ಡಿಸಿಎಂ ದಿನೇಶ್ ಶರ್ಮಾ ಸಹ ಯಾರೂ ಕೂಡ ಸಂಸತ್ ಅಥವಾ ರಾಷ್ಟ್ರಪತಿಗೆ ನಿರ್ದೇಶನ ನೀಡಲಾಗದು ಎಂದಿದ್ದರು.

ಇತ್ತೀಚೆಗೆ ಜಾರಿಗೆ ತಂದ ವಕ್ತ್ ತಿದ್ದುಪಡ) ಕಾಯ್ದೆ, 2025ರ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆ ಈ ಹೇಳಿಕೆಗಳು ಬಂದಿವೆ. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ವಕ್ಫ್ ಕಾಯ್ದೆಯ ಕೆಲವು ನಿಬಂಧನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆಗಳನ್ನು ಎತ್ತಿತ್ತು. ಮೇ 5ರಂದು ಮುಂದಿನ ವಿಚಾರಣೆಯವರೆಗೆ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲವು ಅಂಶಗಳನ್ನು ಜಾರಿಗೊಳಿಸುವುದಿಲ್ಲ ಎಂದು ಸರ್ಕಾರವು ಉನ್ನತ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.