ADVERTISEMENT

ರಾಣಾ ಸಂಗಾ ಅವಹೇಳನ; ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

ರಾಜ್ಯಸಭಾ ಅಧಿವೇಶನದಲ್ಲಿ ಗದ್ದಲ; ಲೋಕಸಭೆಯಲ್ಲಿ ಪ್ರತಿಧ್ವನಿ

ಪಿಟಿಐ
Published 28 ಮಾರ್ಚ್ 2025, 15:28 IST
Last Updated 28 ಮಾರ್ಚ್ 2025, 15:28 IST
ರಾಮ್‌ಜಿ ಲಾಲ್‌ ಸುಮನ್‌‌–ಪಿಟಿಐ ಚಿತ್ರ
ರಾಮ್‌ಜಿ ಲಾಲ್‌ ಸುಮನ್‌‌–ಪಿಟಿಐ ಚಿತ್ರ   

ನವದೆಹಲಿ: ರಜಪೂತ ದೊರೆ ರಾಣಾ ಸಂಗಾ ಕುರಿತಾಗಿ ಸಮಾಜವಾದಿ ಪಕ್ಷದ ಸಂಸದ ರಾಮ್‌ಜಿ ಲಾಲ್‌ ಸುಮನ್‌ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಸಂಸದರು ಶುಕ್ರವಾರ ರಾಜ್ಯಸಭೆಯಲ್ಲಿ ಧರಣಿ ನಡೆಸಿದರು.

ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ, ಬಿಜೆಪಿ ಸಂಸದರು ಎದ್ದುನಿಂತು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್, ಕೇಂದ್ರ ಸಚಿವರು, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಈ ವಿಷಯದ ಬಗ್ಗೆ ಚರ್ಚಿಸಿದರು. ಆದರೆ, ಬಿಜೆಪಿ ಸದಸ್ಯರು ಕ್ಷಮೆಗೆ ಪಟ್ಟುಹಿಡಿದು ಘೋಷಣೆ ಕೂಗಿದರು.

ADVERTISEMENT

ಧನಕರ್‌ ಅವರೇ ಪದೇ ಪದೇ ಮನವಿ ಮಾಡಿದರೂ ಕೂಡ ಘೋಷಣೆ ಕೂಗುವುದು ನಿಲ್ಲಲಿಲ್ಲ. ಹೀಗಾಗಿ, ಅಧಿವೇಶನವನ್ನು ಮಧ್ಯಾಹ್ನ 12ಕ್ಕೆ ಮುಂದೂಡಿದರು.

‘ರಾಣಾ ಸಂಗಾ ಅವರು ಶೌರ್ಯ, ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಸಂಕೇತವಾಗಿದ್ದಾರೆ. ಸುಮನ್‌ ಅವರ ಹೇಳಿಕೆಯು ಅವಹೇಳನಕಾರಿಯಾಗಿದ್ದು, ನೋವುಂಟು ಮಾಡಿದೆ’ ಎಂದು ಧನ್‌ಕರ್ ತಿಳಿಸಿದರು.

ಸಚಿವ ಕಿರಣ್‌ ರಿಜಿಜು ಕೂಡ ಹೇಳಿಕೆಯನ್ನು ಕಟುವಾಗಿ ಖಂಡಿಸಿದರು. ಮಧ್ಯಪ್ರವೇಶಿಸಿ ಮಾತನಾಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ  ‘ದೇಶಕ್ಕಾಗಿ ಮಡಿದ ಪ್ರತಿಯೊಬ್ಬ ದೇಶಭಕ್ತರನ್ನು ಗೌರವಿಸುತ್ತೇವೆ. ಇದೇ ಕಾರಣಕ್ಕೆ, ಕಾನೂನನ್ನು ಕೈಗೆತ್ತಿಕೊಂಡು, ಆಸ್ತಿಪಾಸ್ತಿ ನಷ್ಟ ಉಂಟುಮಾಡುವ ಮೂಲಕ  ದಲಿತ ವಿರೋಧಿ ಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದರು. 

ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಸಂಸದ ರಾಧಾ ಮೋಹನ ದಾಸ್‌,‌‘ ಈ ವಿಷಯದಲ್ಲಿ‌ ದಲಿತ ರಾಜಕೀಯ ಬೆರೆಸುತ್ತಿದ್ದು, ಕಾಂಗ್ರೆಸ್‌ ಪಕ್ಷವು ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ’ ಎಂದು ಆರೋಪಿಸಿದರು.

ಮಧ್ಯಾಹ್ನದ ನಂತರ ಮತ್ತೆ ಸುಮನ್‌ ಮಾತನಾಡಲು ಎದ್ದುನಿಂತ ವೇಳೆ ಆಡಳಿತ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದರು. ಈ ವೇಳೆ ಖರ್ಗೆ, ಡಿಎಂ‌ಕೆಯ ತಿರುಚ್ಚಿಶಿವ, ಆಮ್‌ಆದ್ಮಿ ಪಕ್ಷದ ಸಂಜಯ್‌ ಸಿಂಗ್‌ ಬೆಂಬಲಕ್ಕೆ ಧಾವಿಸಿದರು. ಮಾತನಾಡಲು ಅವಕಾಶ ಸಿಗದ ಕಾರಣ, ಪ್ರತಿಪಕ್ಷದ ಸದಸ್ಯರು ಸದನದಿಂದ ಹೊರನಡೆದರು.

ಮನೆ ಮೇಲೆ ದಾಳಿ: ಸಂಗಾ ಅವರನ್ನು ‘ದೇಶದ್ರೋಹಿ’ ಎಂದು ಕರೆದ ಸುಮನ್‌ ಅವರ ಹೇಳಿಕೆಯನ್ನು ಖಂಡಿಸಿ ಕರ್ಣಿಸೇನಾದ ಕಾರ್ಯಕರ್ತರು ಆಗ್ರಾದಲ್ಲಿರುವ ಸಂಸದ ಸುಮನ್‌ ಮನೆಯನ್ನು ಜಖಂಗೊಳಿಸಿದರು.

ಲೋಕಸಭೆಯಲ್ಲಿ ಪ್ರತಿಧ್ವನಿ: ರಾಣಾ ಸಂಗಾ ವಿರುದ್ಧ ಹೇಳಿಕೆ ನೀಡಿದ ಸುಮನ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗಿದರು. 

ಏನು ಹೇಳಿಕೆ ನೀಡಿದ್ದರು..?

‘ಬಾಬರ್‌ನನ್ನು ಭಾರತಕ್ಕೆ ಕರೆತಂದವರು ಯಾರು? ಇಬ್ರಾಹಿಂ ಲೋಧಿಯನ್ನು ಸೋಲಿಸಲು ಬಾಬರ್‌ನನ್ನು ಆಹ್ವಾನಿಸಿದ್ದು ರಾಣಾ ಸಂಗಾ. ತರ್ಕದ ಪ್ರಕಾರ, ಭಾರತದ ಮುಸಲ್ಮಾನರನ್ನು ಬಾಬರ್‌ನ ವಂಶಸ್ಥರು ಎಂದು ಕರೆದರೆ, ನೀವು ರಾಣಾ ಸಂಗಾನ ವಂಶಸ್ಥರು ದೇಶದ್ರೋಹಿಗಳು’ ಎಂದು ರಾಮ್‌ಜಿ ಲಾಲ್‌ ಸುಮನ್‌ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕುರಿತು ಕ್ಷಮೆಯಾಚಿಸಲು ಅಥವಾ ಹಿಂಪಡೆಯಲು ನಿರಾಕರಿಸಿದ್ದರು.

ರಾಣಾ ಸಂಗಾ ಅವರು 1508ರಿಂದ 1528ರವರೆಗೆ ಮೇವಾರ್‌ ಆಳ್ವಿಕೆ ನಡೆಸಿದ್ದರು.

ಬಜೆಟ್‌ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ರಾಜ್ಯಸಭಾ ಸಭಾಪತಿ  ಜಗದೀಪ್ ಧನಕರ್–ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.