ADVERTISEMENT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ| ಬಿಜೆಪಿ–ಸೇನಾ ಮೈತ್ರಿಕೂಟಕ್ಕೆ ಸವಾಲೆಸೆದ ಬಂಡಾಯ!

30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಿತ್ರ ಪಕ್ಷಗಳ ಒಳಗಿನವರಿಂದಲೇ ಸವಾಲು

ಮೃತ್ಯುಂಜಯ ಬೋಸ್
Published 17 ಅಕ್ಟೋಬರ್ 2019, 10:11 IST
Last Updated 17 ಅಕ್ಟೋಬರ್ 2019, 10:11 IST
   

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಕೂಟವು ಬಂಡಾಯ ಅಭ್ಯರ್ಥಿಗಳ ಸವಾಲು ಎದುರಿಸಬೇಕಾಗಿದೆ. ಇದು ಚುನಾವಣಾ ಕಣವನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿದೆ.

ಈ ಬಂಡಾಯವು ತನಗೆ ಪ್ರಯೋಜನಕಾರಿ ಎಂದು ಭಾವಿಸಿರುವ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟವು ಬಂಡಾಯ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದೆ. ಜತೆಗೆ, ರಾಜ್‌ ಠಾಕ್ರೆ ನೇತೃತ್ವದ ಎಂಎನ್‌ಎಸ್‌ನೊಂದಿಗೆ ಈ ಮೈತ್ರಿಕೂಟವು ಕೆಲವು ಕ್ಷೇತ್ರಗಳಲ್ಲಿ ‘ಹೊಂದಾಣಿಕೆ’ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಬಂಡಾಯಗಾರರ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದರು. ಬಳಿಕ, ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಇದು ಫಲ ನೀಡಿಲ್ಲ.

ಐವರು ಹಾಲಿ ಶಾಸಕರು– ಚರಣ್‌ ವಾಘ್‌ಮಾರೆ, ರಾಜು ತೋಡಸಾಮ್‌, ಬಾಲಾಸಾಹೇಬ್‌ ಸನಪ್‌, ನಾರಾಯಣ ಪವಾರ್‌ (ಬಿಜೆಪಿ) ಮತ್ತು ತೃಪ್ತಿ ಸಾವಂತ್‌ (ಸೇನಾ) ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸವಾಲು ಒಡ್ಡಿದ್ದಾರೆ. ಕೊಂಕಣ, ವಿದರ್ಭ ಮತ್ತು ಮರಾಠವಾಡದಲ್ಲಿ ಬಂಡಾಯ ಹೆಚ್ಚಿನ ಪ್ರಮಾಣದಲ್ಲಿ ಇದೆ.

ಮುಕ್ತಾಯಿನಗರ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ಮುಖಂಡ ಏಕನಾಥ ಖಾಡ್ಸೆ ಬದಲಿಗೆ ಮಗಳು ರೋಹಿಣಿಗೆ ಟಿಕೆಟ್‌ ನೀಡಲಾಗಿದೆ. ಇಲ್ಲಿ ಅವರಿಗೆ ಸೇನಾದ ಬಂಡಾಯ ಅಭ್ಯರ್ಥಿ ಚಂದ್ರಕಾಂತ ಪಾಟೀಲ್‌ ಎದುರಾಳಿ. ಎನ್‌ಸಿಪಿ ಅಭ್ಯರ್ಥಿ ರವೀಂದ್ರ ಪಾಟೀಲ್‌ ಅವರು ನಾಮಪತ್ರ ಹಿಂದಕ್ಕೆ ಪಡೆದು ಚಂದ್ರಕಾಂತ್‌ಗೆ ಬೆಂಬಲ ಘೋಷಿಸಿದ್ದಾರೆ.

ಠಾಕ್ರೆ ಕುಟುಂಬದ ನಿವಾಸ ‘ಮಾತೋಶ್ರೀ’ ಇರುವ ಬಾಂದ್ರಾ ಪೂರ್ವ ಕ್ಷೇತ್ರದಲ್ಲಿಯೇ ಸೇನಾಕ್ಕೆ ಬಂಡಾಯದ ಬಿಸಿ ತಟ್ಟಿದೆ. ಮುಂಬೈ ಮೇಯರ್‌ ಪ್ರೊ. ವಿಶ್ವನಾಥ ಮಹದೇಶ್ವರ್‌ ಸೇನಾ ಅಭ್ಯರ್ಥಿ. ಹಾಲಿ ಶಾಸಕಿ ತೃಪ್ತಿ ಸಾವಂತ್‌ ಇಲ್ಲಿ ಬಂಡಾಯ ಅಭ್ಯರ್ಥಿ. ತೃಪ್ತಿಯವರ ಗಂಡ ಬಾಲಾ ಸಾವಂತ್‌ ಈ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸಿದ್ದರು. ಅವರ ನಿಧನದಿಂದ ಕ್ಷೇತ್ರ ತೆರವಾಗಿತ್ತು. 2015ರಲ್ಲಿ ನಡೆದ ಉಪಚುನಾವಣೆಯಲ್ಲಿ ತೃಪ್ತಿ ಆಯ್ಕೆ ಆಗಿದ್ದರು. ಆಗ ಕಾಂಗ್ರೆಸ್‌ನಲ್ಲಿದ್ದ ನಾರಾಯಣ ರಾಣೆಯವರನ್ನು ತೃಪ್ತಿ ಸೋಲಿಸಿದ್ದರು.

ಸಾವಂತವಾಡಿಯಲ್ಲಿ ಸ್ಪರ್ಧಿಸಿರುವ ಗೃಹ ಖಾತೆಯ ರಾಜ್ಯ ಸಚಿವ ದೀಪಕ್‌ ಕೇಸರ್ಕರ್‌ ಅವರ ವಿರುದ್ಧ ಸೇನಾದ ರಾಜನ್‌ ತೆಲಿ ಪಕ್ಷೇತರನಾಗಿ ಕಣಕ್ಕೆ ಇಳಿದಿದ್ದಾರೆ.

ಬುಡಕಟ್ಟು ಸಮುದಾಯದ ಮೀಸಲು ಕ್ಷೇತ್ರ ವಿಕ್ರಮಗಡದಲ್ಲಿ ಬಿಜೆಪಿಯ ಹೇಮಂತ್‌ ಸಾವರಾ ವಿರುದ್ಧ ಸುರೇಖಾ ಟೆಟ್ಲೆ ಬಂಡಾಯ ಅಭ್ಯರ್ಥಿ. ರಾಮಟೆಕ್‌ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿದ್ದರೂ ಸೇನಾದ ಮಾಜಿ ಶಾಸಕ ಅಶೀಷ್‌ ಜೈಸ್ವಾಲ್‌ ಕಣದಲ್ಲಿದ್ದಾರೆ.

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ನಿಕಟವರ್ತಿ ಮಹೇಶ್‌ ಅವರು ಉರಾನ್‌ ಕ್ಷೇತ್ರದಿಂದ ಸಲ್ಲಿಸಿದ್ದ ನಾಮಪತ್ರವನ್ನು ಹಿಂದಕ್ಕೆ ಪಡೆದಿಲ್ಲ. ಇಲ್ಲಿ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಮನೋಹರ್‌ ಬೋಯಿರ್‌.

ಕುಟುಂಬ ಪ್ರತಿಷ್ಠೆ

ಕಾಂಗ್ರೆಸ್‌ ಶಾಸಕರಾಗಿದ್ದ ನಿತೇಶ್‌ ರಾಣೆ ಬಿಜೆಪಿ ಸೇರಿ ಕಣಕವಲಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಅವರ ವಿರುದ್ಧ ಸೇನಾದ ಬಂಡಾಯ ಅಭ್ಯರ್ಥಿ ಸತೀಶ್‌ ಸಾಮಂತ್‌ ಕಣದಲ್ಲಿದ್ದಾರೆ. ರಾಣೆ ಮತ್ತು ಠಾಕ್ರೆ ಕುಟುಂಬದ ನಡುವೆ ಭಾರಿ ಜಿದ್ದಾಜಿದ್ದಿ ಹಿಂದಿನಿಂದಲೂ ಇದೆ.

ಕರಾಡ್‌ ದಕ್ಷಿಣ ಕ್ಷೇತ್ರದಲ್ಲಿಕಾಂಗ್ರೆಸ್‌ ಮುಖಂಡ ಪೃಥ್ವಿರಾಜ್‌ ಚವಾಣ್‌ ಅವರಿಗೆ ಅವರದೇ ಪಕ್ಷದ ಉದಯಸಿಂಹ ಉಂಡಲ್ಕರ್‌ ಅವರಿಂದ ಸ್ಪರ್ಧೆ ಎದುರಾಗಿದೆ. ಚವಾಣ್‌ ಮತ್ತು ಉಂಡಲ್ಕರ್‌ ಕುಟುಂಬಗಳ ನಡುವೆ ರಾಜಕೀಯ ಪ್ರತಿಸ್ಪರ್ಧೆ ಇದೆ.

ಚುನಾವಣಾ ಕಣ

*288 – ಒಟ್ಟು ಕ್ಷೇತ್ರಗಳು

* 3,239 – ಕಣದಲ್ಲಿರುವ ಅಭ್ಯರ್ಥಿಗಳು

* 38 – ಅಭ್ಯರ್ಥಿಗಳು ನಾಂದೇಡ್‌ನಲ್ಲಿ ಕಣದಲ್ಲಿದ್ದಾರೆ. ಇದು ಗರಿಷ್ಠ ಅಭ್ಯರ್ಥಿಗಳಿರುವ ಕ್ಷೇತ್ರ

* 3 – ಚಿಪ್ಲುನ್‌ ಕ್ಷೇತ್ರದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು. ಇದು ಅತಿ ಕಡಿಮೆ ಅಭ್ಯರ್ಥಿಗಳಿರುವ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.