ADVERTISEMENT

ಉತ್ತರ ಪ್ರದೇಶ ಚುನಾವಣೆ: ಅಖಿಲೇಶ್‌ಗೆ ಪಾಕಿಸ್ತಾನದ ಮೇಲೆ ಪ್ರೀತಿ ಎಂದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 19:31 IST
Last Updated 24 ಜನವರಿ 2022, 19:31 IST
ಸಂಬಿತ್ ಪಾತ್ರಾ
ಸಂಬಿತ್ ಪಾತ್ರಾ   

ಲಖನೌ/ನವದೆಹಲಿ: ಉತ್ತರ ಪ್ರದೇಶ ಚುನಾವಣೆಗೆ ಈಗ ಪಾಕಿಸ್ತಾನ, ಮಹಮ್ಮದ್ ಅಲಿ ಜಿನ್ನಾ, ಯಾಕೂಬ್ ಮೆಮನ್ ಮತ್ತು ಅಜ್ಮಲ್ ಕಸಬ್‌ನನ್ನು ಎಳೆದು ತರಲಾಗಿದೆ. ‘ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶ ಚುನಾವಣೆಗೆ ಪಾಕಿಸ್ತಾನ ಮತ್ತು ಮಹಮ್ಮದ್ ಆಲಿ ಜಿನ್ನಾ ಅವರನ್ನು ಪದೇ ಪದೇ ಎಳೆದು ತರುತ್ತಿದ್ದಾರೆ. ಇದು ಪಾಕಿಸ್ತಾನದ ಬಗ್ಗೆ ಅವರಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಲೇವಡಿ ಮಾಡಿದ್ದಾರೆ.

ಈಚೆಗೆ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಖಿಲೇಶ್ ಯಾದವ್ ಅವರು, ಚೀನಾ ನಮ್ಮ ನಿಜವಾದ ಶತ್ರು. ಪಾಕಿಸ್ತಾನ ನಮ್ಮ ರಾಜಕೀಯ ಶತ್ರು ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪಾತ್ರಾ ಅವರು ಹೀಗೆ ಲೇವಡಿ ಮಾಡಿದ್ದಾರೆ.

‘ಪಾಕಿಸ್ತಾನವು ಭಾರತದ ರಾಜಕೀಯ ಶತ್ರುವಷ್ಟೆ. ಬಿಜೆಪಿ ತನ್ನ ಮತ ರಾಜಕಾರಣಕ್ಕಾಗಿ ಪದೇ ಪದೇ ಪಾಕಿಸ್ತಾನವನ್ನು ಗುರಿ ಮಾಡಿ ಮಾತನಾಡುತ್ತದೆ. ನಮ್ಮ ನಿಜವಾದ ಶತ್ರುವಾದ ಚೀನಾ, ನಮ್ಮ ನೆಲವನ್ನು ಅತಿಕ್ರಮಿಸಿಕೊಳ್ಳುತ್ತಿದೆ’ ಎಂದು ಅಖಿಲೇಶ್ ಯಾದವ್ ಹೇಳಿದ್ದರು.

ADVERTISEMENT

‘ಜಮ್ಮು–ಕಾಶ್ಮೀರದಲ್ಲಿ ನಮ್ಮ ಜನರು ಪ್ರತಿದಿನ ಉಗ್ರರ ಗುಂಡಿಗೆ ಬಲಿಯಾಗುತ್ತಿದ್ದಾರೆ. ಅವರ ನೋವು ಅಖಿಲೇಶ್‌ಗೆ ಅರ್ಥವಾಗುತ್ತದೆಯೇ?ಇದು ಅತ್ಯಂತ ದುರದೃಷ್ಟದ ಹೇಳಿಕೆ. ಈ ರೀತಿ ಹೇಳಿಕೆ ನೀಡುವ ಮೂಲಕ ಅಖಿಲೇಶ್ ಅವರು ದೇಶದ ಜನರನ್ನು ಅವಮಾನಿಸಿದ್ದಾರೆ. ಹೀಗಾಗಿ ಅವರು ದೇಶದ ಜನರಕ್ಷಮೆಯಾಚಿಸಬೇಕು’ ಎಂದು ಪಾತ್ರಾ ಆಗ್ರಹಿಸಿದ್ದಾರೆ.

‘ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಈ ಇಬ್ಬರೂ ನಾಯಕರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ನಾವು ಮತ ಕೇಳುತ್ತಿದ್ದೇವೆ. ಆದರೆ ಸಮಾಜವಾದಿ ಪಕ್ಷವು ಚುನಾವಣೆ ಎದುರಿಸಲು ಪಾಕಿಸ್ತಾನ ಮತ್ತು ಜಿನ್ನಾರನ್ನು ಅವಲಂಬಿಸಿದೆ’ ಎಂದು ಪಾತ್ರಾ ಲೇವಡಿ ಮಾಡಿದ್ದಾರೆ.

‘ಮುಂಬೈ ಬಾಂಬ್‌ ಸ್ಫೋಟದ ಸಂಚುಕೋರ ಯಾಕೂಬ್ ಮೆಮನ್ ಮತ್ತು ಮುಂಬೈ ದಾಳಿಯ ಅಜ್ಮಲ್ ಕಸಬ್‌ನನ್ನು ಗಲ್ಲಿಗೆ ಏರಿಸದೇ ಇದ್ದಿದ್ದರೆ, ಈ ಚುನಾವಣೆಯಲ್ಲಿ ಅವರಿಗೆ ಅಖಿಲೇಶ್ ಟಿಕೆಟ್ ನೀಡುತ್ತಿದ್ದರೇನೋ. ಅಥವಾ ಅವರನ್ನು ಕರೆದು ತಾರಾ
ಪ್ರಚಾರಕರನ್ನಾಗಿ ಮಾಡುತ್ತಿದ್ದರೇನೊ’ ಎಂದು ಪಾತ್ರಾ ಟೀಕಿಸಿದ್ದಾರೆ.

‘ಈ ಚುನಾವಣೆ ಎಸ್‌ಪಿಯ ಎಕ್ಸ್‌ಪ್ರೆಸ್‌ ಹೆದ್ದಾರಿಗಳು ಮತ್ತು ಬಿಜೆಪಿಯ ಎಕ್ಸ್‌ಪ್ರೆಸ್‌ ಹೆದ್ದಾರಿಗಳ ನಡುವಣ ಯುದ್ಧ. ಬಿಜೆಪಿಯು ಪೂರ್ವಾಂಚಲ, ಬುಂದೇಲ್‌ಖಂಡ, ಗಂಗಾ ಮತ್ತು ಗೋರಖಪುರ ಎಕ್ಸ್‌ಪ್ರೆಸ್‌ ಹೆದ್ದಾರಿಗಳನ್ನು ನಿರ್ಮಿಸಿದೆ. ಆದರೆ ಎಸ್‌ಪಿಯದ್ದು ಗೂಂಡಾಗಿರಿ, ದಂಗೆ ಮತ್ತು ಮಾಫಿಯಾ ಎಕ್ಸ್‌ಪ್ರೆಸ್‌ ಹೆದ್ದಾರಿಗಳು. ಇವುಗಳ ಮಧ್ಯೆ ಮತದಾರರು ತಮಗೆ ಯಾವ ಹೆದ್ದಾರಿ ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಪಾತ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.