ADVERTISEMENT

ಕೃಷ್ಣಾ: ಮಹಾರಾಷ್ಟ್ರ ಕ್ಯಾತೆಗೆ ಬಿಜೆಪಿ ಕಿಡಿ

ಕೇಂದ್ರ ಜಲಶಕ್ತಿ ಸಚಿವರಿಗೆ ಸಂಸದರ ನಿಯೋಗದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 15:31 IST
Last Updated 7 ಆಗಸ್ಟ್ 2025, 15:31 IST
ಸಿ.ಆರ್‌.ಪಾಟೀಲ ಅವರಿಗೆ ಬಸವರಾಜ ಬೊಮ್ಮಾಯಿ ಹಾಗೂ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು. ಪಿ.ಸಿ.ಗದ್ದಿಗೌಡರ, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇದ್ದರು. 
ಸಿ.ಆರ್‌.ಪಾಟೀಲ ಅವರಿಗೆ ಬಸವರಾಜ ಬೊಮ್ಮಾಯಿ ಹಾಗೂ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು. ಪಿ.ಸಿ.ಗದ್ದಿಗೌಡರ, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇದ್ದರು.     

ನವದೆಹಲಿ: ‘ಆಲಮಟ್ಟಿ ಆಣೆಕಟ್ಟೆ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರ ಅನವಶ್ಯಕ ಕ್ಯಾತೆ ತೆಗೆಯುತ್ತಿರುವುದು ಖಂಡನೀಯ. ಕೃಷ್ಣಾ ನ್ಯಾಯಮಂಡಳಿಯ ತೀರ್ಪಿನಂತೆ ಆಲಮಟ್ಟಿ ಆಣೆಕಟ್ಟೆ ಎತ್ತರ ಹೆಚ್ಚಳ ಮಾಡುವುದು ಕರ್ನಾಟಕದ ಹಕ್ಕು’ ಎಂದು ರಾಜ್ಯದ ಬಿಜೆಪಿ ಸಂಸದರ ನಿಯೋಗವು ಕೇಂದ್ರ ಜಲ ಶಕ್ತಿ ಸಚಿವ ಸಿ.ಆ‌ರ್. ಪಾಟೀಲ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ.

ಕೇಂದ್ರ ಆಹಾರ ಸಚಿವ ಪ್ರಲ್ದಾದ ಜೋಶಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಿಯೋಗವು ಸಚಿವರನ್ನು ಗುರುವಾರ ಇಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಬೊಮ್ಮಾಯಿ ಸುದ್ದಿಗಾರರ ಜತೆಗೆ ಮಾತನಾಡಿ, ‘ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನೇತೃತ್ವದಲ್ಲಿ ಮಹಾರಾಷ್ಟ್ರದ ಸಂಸದರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಆಲಮಟ್ಟಿ ಆಣೆಕಟ್ಟೆ ಎತ್ತರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ರಾಜ್ಯದ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಾಸ್ತವಾಂಶ ತಿಳಿಸಿದೆ’ ಎಂದರು.

ADVERTISEMENT

‘ಆಣೆಕಟ್ಟಿನ ಎತ್ತರವನ್ನು 524 ಮೀಟರ್‌ಗೆ ಏರಿಸಲು ಕೃಷ್ಣಾ ನ್ಯಾಯಮಂಡಳಿ- 2 ಒಪ್ಪಿಗೆ ಕೊಟ್ಟಿದೆ. ಇದಕ್ಕೂ ಮೊದಲು ಕೇಂದ್ರ ಹಾಗೂ ಮೂರು ರಾಜ್ಯಗಳ ತಂಡವು ಜಂಟಿ ಸಮೀಕ್ಷೆ ನಡೆಸಿ ಆಣೆಕಟ್ಟೆಯಿಂದ ಪ್ರವಾಹ ಉಂಟಾಗುವುದಿಲ್ಲ ಎಂದು ವರದಿ ಸಲ್ಲಿಸಿತ್ತು. 2005ರಲ್ಲಿ ಪ್ರವಾಹ ಉಂಟಾದಾಗ ಕೇಂದ್ರ ಜಲ ಆಯೋಗವೂ ಆಣೆಕಟ್ಟೆಯಿಂದ ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ಪ್ರವಾಹ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಮಹಾರಾಷ್ಟ್ರದ ತಗಾದೆ ದುರುದ್ದೇಶದಿಂದ ಕೂಡಿದೆ’ ಎಂದು ಅವರು ಕಿಡಿಕಾರಿದರು.

ಆಣೆಕಟ್ಟೆ ಎತ್ತರ ಹೆಚ್ಚಳ ಮಾಡುವುದು ನಮ್ಮ ಹಕ್ಕು. ನಮ್ಮ ಹಕ್ಕನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಗೆಜೆಟ್‌ ಅಧಿಸೂಚನೆಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದು,  ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. ಈ ಪ್ರಕರಣ ತ್ವರಿತ ವಿಚಾರಣೆಗೆ ಬರುವಂತೆ ಮಾಡಲು ರಾಜ್ಯ ಸರ್ಕಾರ ತನ್ನ ಎಲ್ಲ ಶಕ್ತಿ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

‘ಅಂತರರಾಜ್ಯ ಜಲ ವಿವಾದ ಕಾಯ್ದೆ ಸ್ಪಷ್ಟವಾಗಿದೆ. ಕಾಯ್ದೆಯ ಸೆಕ್ಷನ್‌ 3 ಪ್ರಕಾರ ನ್ಯಾಯಮಂಡಳಿ ಎರಡೂ ಕಡೆ ವಿಚಾರಣೆ ನಡೆಸಿ ಆದೇಶ ಹೊರಡಿಸಿದರೆ ಅದು ಸುಪ್ರೀಂ ಕೋರ್ಟ್ ಡಿಕ್ರಿ ಇದ್ದ ಹಾಗೆ. ಉದಾಹರಣೆಗೆ ಕಾವೇರಿ ವಿಚಾರದಲ್ಲಿ ಹತ್ತು- ಹನ್ನೆರಡು ವರ್ಷಗಳ ನಂತರ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಸಂವಿಧಾನದಲ್ಲಿ ಸುಪ್ರೀಂ ಕೋರ್ಟ್‌ಗೆ ಕೆಲವು ಅಧಿಕಾರವಿದೆ. ಅದನ್ನು ಸುಪ್ರೀಂ ಕೋರ್ಟ್ ಬಳಕೆ ಮಾಡುತ್ತದೆ’ ಎಂದು ಹೇಳಿದರು.

ನಿಯೋಗದಲ್ಲಿ ಬಿಜೆಪಿ ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಗದ್ದಿಗೌಡರ, ರಮೇಶ ಜಿಗಜಿಣಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.