ADVERTISEMENT

ವಿಪಕ್ಷಗಳ ನೇತೃತ್ವದ ಸರ್ಕಾರ ಕೆಡವಲು ₹6,300 ಕೋಟಿ ವೆಚ್ಚ: ಅರವಿಂದ ಕೇಜ್ರಿವಾಲ್

ಬಿಜೆಪಿ ವಿರುದ್ಧ ದೆಹಲಿ ಸಿ.ಎಂ ಅರವಿಂದ್‌ ಕೇಜ್ರಿವಾಲ್ ಗಂಭೀರ ಆರೋಪ

ಪಿಟಿಐ
Published 27 ಆಗಸ್ಟ್ 2022, 20:57 IST
Last Updated 27 ಆಗಸ್ಟ್ 2022, 20:57 IST
   

ನವದೆಹಲಿ: ವಿವಿಧ ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಈವರೆಗೆ ₹6,300 ಕೋಟಿ ಖರ್ಚು ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ‘ಒಂದು ವೇಳೆ, ರಾಜ್ಯ ಸರ್ಕಾರಗಳನ್ನು ಬುಡಮೇಲು ಮಾಡಲು ಕೇಂದ್ರ ಸರ್ಕಾರವು ಇಷ್ಟು ಹಣವನ್ನು ಖರ್ಚು ಮಾಡಿರದಿದ್ದರೆ, ಮೊಸರು, ಮಜ್ಜಿಗೆಗೆ ಜಿಎಸ್‌ಟಿ ವಿಧಿಸುವ ಪ್ರಮೇಯ ಬರುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಬೆಲೆ ಏರಿಕೆಯಿಂದ ದೇಶದ ಜನರು ಪರಿತಪಿಸುತ್ತಿರುವಾಗ, ರಾಜ್ಯ ಸರ್ಕಾರಗಳನ್ನು ಕೆಡವಲು ಹಾಗೂ ಶಾಸಕರನ್ನು ಸೆಳೆಯಲು ಬಿಜೆಪಿಯು ಕೋಟ್ಯಂತರ ರೂಪಾಯಿಯನ್ನು ವ್ಯಯಿಸುತ್ತಿದೆ ಎಂದು ಕೇಜ್ರಿವಾಲ್ ದೂರಿದ್ದಾರೆ. ಶುಕ್ರವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ್ದ ಅವರು, ಬಿಜೆಪಿಯು 277 ಶಾಸಕರನ್ನು ಖರೀದಿಸಿದೆ ಎಂದು ಆರೋಪಿಸಿದ್ದರು.

ಅಗತ್ಯ ವಸ್ತುಗಳಿಗೆ ಜಿಎಸ್‌ಟಿ ವಿಧಿಸಿ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಸಂಗ್ರಹಿಸಿದ ಹಣವನ್ನು ಶಾಸಕರ ಖರೀದಿಗೆ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಶುಕ್ರವಾರ ನಡೆದ ವಿಶೇಷ ಅಧಿವೇಶನದಲ್ಲಿ ಆರೋಪಿಸಿದ್ದ ಕೇಜ್ರಿವಾಲ್, ಬಿಜೆಪಿಯನ್ನು ‘ರಾಜ್ಯ ಸರ್ಕಾರಗಳ ಸರಣಿ ಹಂತಕ’ ಎಂದು ಕರೆದಿದ್ದರು.

ADVERTISEMENT

ಶನಿವಾರ ಟ್ವೀಟ್ ಮಾಡಿರುವ ಅವರು, ‘ಮೊಸರು, ಮಜ್ಜಿಗೆ, ಜೇನುತುಪ್ಪ, ಅಕ್ಕಿ, ಗೋಧಿಗೆ ಜಿಎಸ್‌ಟಿ ವಿಧಿಸಲಾಗಿದ್ದು, ಈ ನಿರ್ಧಾರದಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ ₹7,500 ಕೋಟಿ ತೆರಿಗೆ ಸಂಗ್ರಹವಾಗಲಿದೆ ಎಂದು ಉಲ್ಲೇಖಿಸಿದ್ದಾರೆ.

ಎಎಪಿಯನ್ನು ತ್ಯಜಿಸಿ ಬಿಜೆಪಿ ಸೇರಿದರೆ ತಲಾ ₹20 ಕೋಟಿ ನೀಡುವ ಪ್ರಸ್ತಾವವನ್ನು ಬಿಜೆಪಿ ಇಟ್ಟಿತ್ತು ಎಂಬುದಾಗಿ ಎಎಪಿಯ ನಾಲ್ವರು ಶಾಸಕರು ಇತ್ತೀಚೆಗೆ ಆರೋಪ ಮಾಡಿದ್ದರು. ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವನ್ನು ಬುಡಮೇಲು ಮಾಡಲು ಪ್ರಧಾನಿ ಮುಂದಾಗಿದ್ದಾರೆ ಎಂದು ಆರೋಪಿಸಿದ್ದ ಎಎಪಿ, ತಮ್ಮ ಪಕ್ಷದ 40ಕ್ಕೂ ಹೆಚ್ಚು ಶಾಸಕರನ್ನು ಸೆಳೆಯಲು ಯತ್ನಿಸಲಾಗುತ್ತಿದೆ ಎಂದಿತ್ತು.

ಅಣಕು ಅಧಿವೇಶನ: ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನ ನಡೆದ ಮರುದಿನ, ಅಣಕು ಅಧಿವೇಶನ ನಡೆಸಿದ ಬಿಜೆಪಿ ಶಾಸಕರು, ದೆಹಲಿ ಸರ್ಕಾರದ ‘ಅಬಕಾರಿ ಹಗರಣ’ವನ್ನು ಟೀಕಿಸಿದರು. ಕೇಜ್ರಿವಾಲ್, ಸಿಸೋಡಿಯಾ ಹಾಗೂ ಆಡಳಿತಾರೂಢ ಪಕ್ಷದ ಶಾಸಕರನ್ನು ಬಿಂಬಿಸುವ ಮುಖವಾಡಗಳನ್ನು ಬಿಜೆಪಿ ಶಾಸಕರು ಧರಿಸಿದ್ದರು. ಎಂಟು ಬಿಜೆಪಿ ಶಾಸಕರನ್ನು ಶುಕ್ರವಾರ ನಡೆದ ಅಧಿವೇಶನದಿಂದ ಹೊರಹಾಕಲಾಗಿತ್ತು. ಹೀಗಾಗಿ, ಶನಿವಾರ ಅಣಕು ಅಧಿವೇಶನ ನಡೆಸಿದಬಿಜೆಪಿ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಭ್ರಷ್ಟಾಚಾರ ಆರೋಪವಿರುವ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ತನ್ನ ಆಗ್ರಹವನ್ನು ಕಾಂಗ್ರೆಸ್
ಪುನರುಚ್ಚರಿಸಿದೆ.

47 ಕಡತ ಸರ್ಕಾರಕ್ಕೆ ವಾಪಸ್‌

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬದಲಾಗಿ, ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಸಿಬ್ಬಂದಿ ಸಹಿಯಿದ್ದ 47 ಕಡತಗಳನ್ನು ಲೆಫ್ಟಿನೆಂಟ್ ಗವರ್ನರ್ ಅವರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ನಡೆಯು, ಸರ್ಕಾರ ಮತ್ತು ಲೆ.ಗವರ್ನರ್ ನಡುವಿನ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.

ಸಲಹೆ ಹಾಗೂ ಅನುಮೋದನೆ ಕೋರಿ ಮುಖ್ಯಮಂತ್ರಿ ಕಚೇರಿಯು ಲೆಫ್ಟಿನೆಂಟ್ ಗವರ್ನರ್ ಸಚಿವಾಲಯಕ್ಕೆ ಮುಖ್ಯಮಂತ್ರಿ ಸಹಿ ಇಲ್ಲದ ಕೆಲವು ಕಡತಗಳನ್ನು ಕಳುಹಿಸುತ್ತಿದೆ ಎಂಬುದಾಗಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಕಳೆದ ವಾರ ಹೇಳಿಕೆ ನೀಡಿದ್ದರು. ಸಕ್ಸೇನಾ ಅವರು ಈ ವಿಚಾರ ಪ್ರಸ್ತಾಪಿಸಿದ ಬಳಿಕವೂ, ಮುಖ್ಯಮಂತ್ರಿ ಸಹಿ ಇಲ್ಲದ ಕಡತಗಳನ್ನು ಸಚಿವಾಲಯಕ್ಕೆ ಮುಖ್ಯಮಂತ್ರಿ ಕಚೇರಿಯು ಕಳಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೇಜ್ರಿವಾಲ್–ಬಿಸ್ವ ಟ್ವಿಟರ್‌ ಸಮರ

ಶಾಲಾ ಶಿಕ್ಷಣ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನಡುವೆ ಬುಧವಾರ ಆರಂಭವಾದ ಟ್ವಿಟರ್‌ ಸಮರ ಶನಿವಾರವೂ ಮುಂದುವರಿದಿದೆ. ‘ಅಸ್ಸಾಂ ಶಾಲೆಗಳನ್ನು ನೋಡಲು ಯಾವಾಗ ಬರಲಿ’ ಎಂದು ಕೇಜ್ರಿವಾಲ್ ಅವರು ಬಿಸ್ವ ಅವರನ್ನು ಪ್ರಶ್ನಿಸಿದ್ದಾರೆ.

ಅಸ್ಸಾಂನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಪತ್ರಿಕಾ ವರದಿ ಕುರಿತು ಬುಧವಾರ ಟ್ವೀಟ್ ಮಾಡಿದ್ದ ಕೇಜ್ರಿವಾಲ್, ಶಾಲೆಗಳನ್ನು ಮುಚ್ಚುವುದು ಪರಿಹಾರವಲ್ಲ ಎಂದಿದ್ದರು. ಇದಕ್ಕೆ ಶುಕ್ರವಾರ ತಿರುಗೇಟು ನೀಡಿದ್ದ ಬಿಸ್ವ, ದೆಹಲಿ ಹಾಗೂ ಅಸ್ಸಾಂನ ಶಾಲೆಗಳ ನಡುವಿನ ವ್ಯತ್ಯಾಸಗಳನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು. ದೆಹಲಿಗಿಂತ ಹೆಚ್ಚಿನ ಸಂಖ್ಯೆ ಶಾಲೆಗಳು, ಶಿಕ್ಷಕರು, ವಿದ್ಯಾರ್ಥಿಗಳು ಅಸ್ಸಾಂನಲ್ಲಿದ್ದು, ಹಲವು ಖಾಸಗಿ ಶಾಲೆಗಳನ್ನೂ ಸರ್ಕಾರ ನಡೆಸುತ್ತಿದೆ ಎಂದಿದ್ದರು. ‘ಪ್ರಾಕೃತಿಕ ವಿಕೋಪಗಳ ನಡುವೆಯೂ ಶಿಕ್ಷಣ ನೀಡುತ್ತಿದ್ದೇವೆ. ಅಸ್ಸಾಂನ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ನೀವು ಭೇಟಿ ಮಾಡಬಹುದು’ ಎಂದು ಕೇಜ್ರಿವಾಲ್‌ಗೆ ಆಹ್ವಾನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.