ಬಿಜೆಪಿ, ಕಾಂಗ್ರೆಸ್
ಪ್ರಾತಿನಿಧಿಕ ಚಿತ್ರ
ನವದೆಹಲಿ: ಭಾರತದಲ್ಲಿ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ನೀಡುತ್ತಿದ್ದ ಅನುದಾನವನ್ನು ಅಮೆರಿಕ ಕಡಿತಗೊಳಿಸುತ್ತಿದ್ದಂತೆಯೇ, ಬಿಜೆಪಿಯು ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಭಾರತದಲ್ಲಿ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅಮೆರಿಕ ನೀಡುತ್ತಿದ್ದ ₹ 182 ಕೋಟಿ (21 ಮಿಲಿಯನ್ ಡಾಲರ್) ಅನುದಾನವನ್ನು ಕಡಿತಗೊಳಿಸಲಾಗಿದೆ. ವೆಚ್ಚ ನಿಯಂತ್ರಣದ ಭಾಗವಾಗಿ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿ ಎಲಾನ್ ಮಸ್ಕ್ ಅವರು ಪ್ರಕಟಿಸಿದ್ದಾರೆ.
ಈ ಕುರಿತು, ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಎಕ್ಸ್/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರವು, ಪ್ರತಿಯೊಂದು ಅವಕಾಶದಲ್ಲಿಯೂ ದೇಶವನ್ನು ದುರ್ಬಲಗೊಳಿಸಲು ಯತ್ನಿಸುವ ರಾಷ್ಟ್ರೀಯ ಹಿತಾಶಕ್ತಿಗೆ ವಿರುದ್ಧವಾದ ಶಕ್ತಿಗಳು ಭಾರತದ ಸಂಸ್ಥೆಗಳ ಒಳಗೆ ನುಸುಳಲು ವ್ಯವಸ್ಥಿತವಾಗಿ ಅವಕಾಶ ಮಾಡಿಕೊಟ್ಟಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ದೂರಿದ್ದಾರೆ. ಹಾಗೆಯೇ, ನೆಹರೂ ಗಾಂಧಿ ಕುಟುಂಬದೊಂದಿಗೆ ನಂಟು ಹೊಂದಿರುವ ಅಮೆರಿಕದ ಉದ್ಯಮಿ ಜಾರ್ಜ್ ಸೊರೋಸ್ ಅವರು ಭಾರತದ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೊರೋಸ್ ಅವರ ಓಪನ್ ಸೊಸೈಟಿ ಫೌಂಡೇಷನ್‌ಗೆ ಸಂಬಂಧಿಸಿದ ದಿ ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಎಲೆಕ್ಟ್ರೋಲ್ ಸಿಸ್ಟಮ್ಸ್ ಜೊತೆಗಿನ ಒಪ್ಪಂದಕ್ಕೆ ಚುನಾವಣಾ ಆಯೋಗವು 2012ರಲ್ಲಿ ಸಹಿ ಮಾಡಿತ್ತು ಎಂದು ಮಾಳವೀಯ ದೂರಿದ್ದಾರೆ.
ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣಾ ಆಯುಕ್ತರ ನೇಮಕದಲ್ಲಿನ ಪಾರದರ್ಶಕತೆ ಕುರಿತು ಪ್ರಶ್ನಿಸುತ್ತಿರುವವರು, ಇಡೀ ಚುನಾವಣಾ ಆಯೋಗವನ್ನೇ ವಿದೇಶಿ ಶಕ್ತಿಗಳ ಕೈಗೆ ಒಪ್ಪಿಸಲು ಹಿಂಜರಿದಿರಲಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
'ಮತದಾನಕ್ಕೆ ₹ 182 ಕೋಟಿ? ಇದು ನಿಜವಾಗಿಯೂ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯಶಕ್ತಿಗಳ ಹಸ್ತಕ್ಷೇಪ. ಇದರಿಂದ ಲಾಭ ಯಾರಿಗೆ? ಆಡಳಿತ ಪಕ್ಷಕ್ಕಂತೂ (ಬಿಜೆಪಿಗಂತೂ) ಅಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.