ADVERTISEMENT

ತಲಾ ₹25 ಕೋಟಿ ನೀಡಿ ಪಂಜಾಬ್‌ ಎಎಪಿ ಶಾಸಕರ ಖರೀದಿಗೆ ಬಿಜೆಪಿ ಯತ್ನ: ಕೇಜ್ರಿವಾಲ್

ಪಿಟಿಐ
Published 14 ಸೆಪ್ಟೆಂಬರ್ 2022, 9:52 IST
Last Updated 14 ಸೆಪ್ಟೆಂಬರ್ 2022, 9:52 IST
   

ನವದೆಹಲಿ: ತಲಾ ₹25 ಕೋಟಿ ಹಣದ ಆಮಿಷವೊಡ್ಡಿ ಪಂಜಾಬ್‌ನ ಆಮ್ ಆದ್ಮಿ ಪಕ್ಷದ 10 ಶಾಸಕರ ಖರೀದಿಗೆ ಬಿಜೆಪಿ ಯತ್ನಿಸಿದೆ ಎಂದು ದೆಹಲಿ ಮುಖ್ಯಮಂತ್ರಿ, ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

‘ಪಂಜಾಬ್‌ನ ನಮ್ಮ 10 ಶಾಸಕರಿಗೆ ತಲಾ ₹ 25 ಕೋಟಿ ಹಣ ನೀಡಿ ಖರೀದಿಗೆ ಬಿಜೆಪಿ ಯತ್ನಿಸಿತ್ತು ಎಂಬ ವಿಷಯ ನಿನ್ನೆಯಷ್ಟೇ ನಮ್ಮ ಗಮನಕ್ಕೆ ಬಂದಿತು. ಇಂದು ನಮ್ಮ ಶಾಸಕರು ಪತ್ರಿಕಾಗೋಷ್ಠಿ ನಡೆಸಲಿದ್ದು, ಬಿಜೆಪಿ ಬಣ್ಣ ಬಯಲು ಮಾಡಲಿದ್ದಾರೆ’ ಎಂದು ಅವರು ಹೇಳಿದರು.

‘ಅವರು ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಉರುಳಿಸುವುದರಲ್ಲಿ ತೊಡಗಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಕೇಜ್ರಿವಾಲ್ ಹೇಳಿದರು.

ADVERTISEMENT

ಸಾರ್ವಜನಿಕರ ಹಣವನ್ನು ಶಾಸಕರ ಖರೀದಿಗೆ ಬಳಸುತ್ತಿರುವುದರಿಂದ ದೇಶದಲ್ಲಿ ಹಣದುಬ್ಬರ ಹೆಚ್ಚಿದೆ ಎಂದು ಎಎಪಿ ಷರಿಷ್ಠರು ದೂರಿದ್ದಾರೆ.

ಗೋವಾದಲ್ಲಿ ಕಾಂಗ್ರೆಸ್‌ನ ಐದು ಶಾಸಕರನ್ನು ಬಿಜೆಪಿ ಸೆಳೆದುಕೊಂಡ ವಿಚಾರವನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಪಕ್ಷವು ತಮ್ಮ ಶಾಸಕರು ಪಕ್ಷಾಂತರ ಮಾಡುವುದನ್ನು ತಡೆಯುವಲ್ಲಿ ವಿಫಲವಾಯಿತು ಎಂದು ಟೀಕಿಸಿದರು.

‘ಮೊದಲಿಗೆ ದೆಹಲಿ ಮತ್ತು ಈಗ ಪಂಜಾಬ್‌ನಲ್ಲಿ ಅವರು ಶಾಸಕರ ಖರೀದಿಗೆ ಯತ್ನಿಸಿದ್ದಾರೆ. ಆದರೆ, ನಾವು ಅವರ ಬಣ್ಣ ಬಯಲು ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.