ADVERTISEMENT

ರಾಮ ಮಂದಿರ ನಿರ್ಮಾಣಕ್ಕೆ ಒಮ್ಮತ ಮೂಡಿಸಲು ಬಿಜೆಪಿ ಯತ್ನ: ಮಹೇಂದ್ರನಾಥ್‌ ಪಾಂಡೆ

ಪಿಟಿಐ
Published 23 ಸೆಪ್ಟೆಂಬರ್ 2018, 13:01 IST
Last Updated 23 ಸೆಪ್ಟೆಂಬರ್ 2018, 13:01 IST
ಬಿಜೆಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಮಹೇಂದ್ರನಾಥ್‌ ಪಾಂಡೆ (ಪಿಟಿಐ ಸಂಗ್ರಹ ಚಿತ್ರ)
ಬಿಜೆಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಮಹೇಂದ್ರನಾಥ್‌ ಪಾಂಡೆ (ಪಿಟಿಐ ಸಂಗ್ರಹ ಚಿತ್ರ)   

ಲಖನೌ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಮ್ಮತ ಮೂಡಿಸುವ ಎಲ್ಲ ಪ್ರಯತ್ನಗಳನ್ನೂ ಬಿಜೆಪಿ ಮಾಡುತ್ತಿದೆ ಎಂದು ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಮಹೇಂದ್ರನಾಥ್‌ ಪಾಂಡೆ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಮೇಲೆ ಎದುರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

‘ರಾಮಮಂದಿರ ನಮಗೆ ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿದೆ. ಇದನ್ನು ಕಾನೂನು ಪ್ರಕಾರವೇ ನಿರ್ಮಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ ಎಂಬುದು ಭಾರತೀಯರಿಗೆ ತಿಳಿದಿದೆ. ಅಲ್ಲಿಯೇ ರಾಮಮಂದಿರ ನಿರ್ಮಾಣವಾಗಬೇಕೆಂದು ಅವರು ಬಯಸುತ್ತಾರೆ. ಪ್ರತಿಯೊಬ್ಬ ಭಾರತೀಯನ ಭಾವನೆಯೇ ಬಿಜೆಪಿ ಭಾವನೆಯೂ ಆಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಾಧುಗಳ ಚರ್ಚೆ: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕಾರ್ಯತಂತ್ರದ ಬಗ್ಗೆ ಹಿಂದೂ ಸಾಧುಗಳ ಸಮಿತಿಯೊಂದು ಮುಂದಿನ ತಿಂಗಳು ನವದೆಹಲಿಯಲ್ಲಿ ಚರ್ಚೆ ನಡೆಸಲಿದೆ.

ರಾಮ ಜನ್ಮಭೂಮಿ ನಿರ್ಮಾಣ ಉಚ್ಚ ಅಧಿಕಾರ ಸಮಿತಿಯ 40 ಸಾಧುಗಳು ಅಕ್ಟೋಬರ್‌ 5ರಂದು ರಾಮ ಜನ್ಮಭೂಮಿ ನ್ಯಾಸ ಟ್ರಸ್ಟ್‌ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಸೇರಲಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ವಿಎಚ್‌ಪಿ ಮಾಜಿ ಮುಖಂಡ ಪ್ರವೀಣ್‌ ತೊಗಾಡಿಯಾ ಅವರು ಭಾಗವಹಿಸಲಿರುವ ಲಖನೌ– ಅಯೋಧ್ಯೆ ಮೆರವಣಿಗೆಗೆ 15 ದಿನ ಮೊದಲು ಸಾಧುಗಳ ಸಭೆ ನಡೆಯಲಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂಬುದು ಎಲ್ಲ ಹಿಂದೂ ಸಾಧುಗಳ ನಿರೀಕ್ಷೆಯಾಗಿದೆ. ಈ ಕಾರ್ಯಕ್ಕೆ ಬಿಜೆಪಿ ಅವಕಾಶ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ಅದಕ್ಕೆ ಪಾಠ ಕಲಿಸಬೇಕಾಗುತ್ತದೆ’ ಎಂದು ಮಹಾಂತ ದಾಸ್‌ ಅಲಿಗಡದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.