ADVERTISEMENT

ಬಿಜೆಪಿ ನನ್ನ ಹೇಳಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:36 IST
Last Updated 3 ಡಿಸೆಂಬರ್ 2022, 14:36 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾವಣ’ ಎಂದು ಸಂಬೋಧಿಸಿದ ತಮ್ಮ ಹೇಳಿಕೆಯನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ರಾಜಕೀಯವೆಂಬುದು ವೈಯಕ್ತಿಕವಾಗಿ ನಡೆಯುವಂತಹದ್ದಲ್ಲ, ಪಾಲಿಸಿಗಳ ಆಧಾರದ ಮೇಲೆ ನಡೆಯುವಂತಹದ್ದು ಎಂದು ಅವರು ಹೇಳಿದ್ದಾರೆ.

ನಮಗೆ ಜನರ ಕೆಲಸ ಮಾಡುವ ರಾಜಕೀಯದಲ್ಲಿ ನಂಬಿಕೆ ಇದೆ. ಆದರೆ, ಬಿಜೆಪಿಯ ರಾಜಕೀಯ ಶೈಲಿಯು ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಮನೋಭಾವವನ್ನು ಹೊಂದಿರುವುದಿಲ್ಲ. ಏಕೆಂದರೆ, ಅವರು ಎಲ್ಲ ಕಡೆ ಒಬ್ಬ ವ್ಯಕ್ತಿಯ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಅವರು ಹೇಳಿದರು.

ADVERTISEMENT

ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಿರೀಕ್ಷೆಗಳ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ನ ಮತಗಳನ್ನು ವಿಭಜಿಸಲು ಯಾರದ್ದೋ ಇಚ್ಛೆಯ ಮೇರೆಗೆ ಅದು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

‘ಬಿಜೆಪಿ ಮತ್ತು ಪ್ರಧಾನಿಯವರ ರಾಜಕೀಯ ಶೈಲಿಯು ಪ್ರಜಾಪ್ರಭುತ್ವದ ಮನೋಭಾವವನ್ನು ಹೊಂದಿರುವುದಿಲ್ಲ. ಅವರ ಪ್ರಚಾರದ ಶೈಲಿಯ ಬಗ್ಗೆ ನಾನು ಹಲವಾರು ಉದಾಹರಣೆಗಳನ್ನು ನೀಡಿದ್ದೇನೆ. ಅವರು ಗುಜರಾತ್ ಚುನಾವಣಾ ಲಾಭಕ್ಕಾಗಿ ನನ್ನ ಹೇಳಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾನು ಯಾವುದೇ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಅಥವಾ ವೈಯಕ್ತಿಕ ಟೀಕೆಗಳನ್ನು ಮಾಡುವುದಿಲ್ಲ. ಏಕೆಂದರೆ, ನನಗೆ 51 ವರ್ಷಗಳ ಸಂಸದೀಯ ರಾಜಕೀಯದ ಅನುಭವವಿದೆ. ನಾನು ಅಭಿವೃದ್ಧಿ, ಹಣದುಬ್ಬರ, ನಿರುದ್ಯೋಗ, ಬಡತನದ ವಿಷಯಗಳ ಬಗ್ಗೆ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದೇನೆ’ ಎಂದು ಖರ್ಗೆ ಹೇಳಿದರು.

ಈ ವಾರದ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ್ದ ಖರ್ಗೆ, ಎಲ್ಲಾ ಚುನಾವಣೆಗಳಲ್ಲಿ ತಮ್ಮ ಮುಖವನ್ನು ನೋಡಿಕೊಂಡು ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಕೇಳುತ್ತಾರೆ. ಹಾಗಾದರೆ, ನೀವು ರಾವಣನಂತೆ 100 ತಲೆಯುಳ್ಳವರಾ? ಎಂದು ಅವರು ಪ್ರಶ್ನಿಸಿದ್ದರು.

ಪ್ರಧಾನಿ ಬಗ್ಗೆ ಖರ್ಗೆಯವರ ಈ ಹೇಳಿಕೆ ಇಡೀ ಗುಜರಾತಿಗರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಹೇಳಿಕೊಂಡಿತ್ತು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.