ADVERTISEMENT

ಲೋಕಸಭೆ ಚುನಾವಣೆ: ಪ್ರಚಾರ ಮಾಡದಂತೆ ತಡೆಯಲು ಬಿಜೆಪಿ ಯತ್ನ- ಕೇಜ್ರಿವಾಲ್‌ ಆರೋಪ

ಪಿಟಿಐ
Published 4 ಜನವರಿ 2024, 13:27 IST
Last Updated 4 ಜನವರಿ 2024, 13:27 IST
<div class="paragraphs"><p>ಕೇಜ್ರಿವಾಲ್‌</p></div>

ಕೇಜ್ರಿವಾಲ್‌

   

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡದಂತೆ ತಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಮ್ಮನ್ನು ಬಂಧಿಸಲು ಮುಂದಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ‘ಪ್ರಾಮಾಣಿಕತೆಯೇ ನನ್ನ ಅತಿದೊಡ್ಡ ಆಸ್ತಿ. ಹಾಗಾಗಿ ಭಾರತೀಯ ಜನತಾ ಪಕ್ಷವು ತಮ್ಮ ಇಮೇಜ್‌ಗೆ ಕಳಂಕ ತರಲು ಬಯಸುತ್ತಿದೆ. ಚುನಾವಣೆಗೆ ಮುನ್ನ ಬಿಜೆಪಿಯು ಉದ್ದೇಶಪೂರ್ವಕವಾಗಿ ಇ.ಡಿಯನ್ನು ಬಳಸಿಕೊಂಡು ತಮ್ಮನ್ನು ಬಂಧಿಸಲು ಯೋಜಿಸಿದೆ’ ಎಂದು ದೂರಿದರು.

ADVERTISEMENT

ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ವಿಜಯ್ ನಾಯರ್ ಅವರು ಬಿಜೆಪಿಗೆ ಸೇರದ ಕಾರಣ ಜೈಲಿನಲ್ಲಿದ್ದಾರೆ ಹೊರತು ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ ಅಲ್ಲ. ಜೈಲಿನಲ್ಲಿರುವ ಯಾವೊಬ್ಬ ಆಪ್ ನಾಯಕರು ಭ್ರಷ್ಟಾಚಾರ ಮಾಡಿರುವುದಕ್ಕೆ ಪುರಾವೆಗಳಿಲ್ಲ ಎಂದು ಪ್ರತಿಪಾದಿಸಿದರು.

‘ಲೋಕಸಭಾ ಚುನಾವಣಾ ಪ್ರಚಾರದಿಂದ ನನ್ನನ್ನು ವ್ಯವಸ್ಥಿತವಾಗಿ ದೂರವಿಡಲು ಬಿಜೆಪಿ ಯತ್ನಿಸುತ್ತಿದೆ. ಇ.ಡಿ ನೀಡಿರುವ ಸಮನ್ಸ್‌ಗಳು ಕಾನೂನುಬಾಹಿರ ಎಂದು ನನ್ನ ಪರ ವಕೀಲರು ತಿಳಿಸಿದ್ದಾರೆ. ಈ ಬಗ್ಗೆ ಇ.ಡಿ ಗೆ ಪತ್ರ ಬರೆದಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಾನೂನುಬದ್ಧವಾಗಿ ಸಮನ್ಸ್ ಜಾರಿಯಾದರೆ ವಿಚಾರಣೆಗೆ ಸಹಕರಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.