ADVERTISEMENT

ಮುಸ್ಲಿಂ ಮೀಸಲಾತಿಗೆ ವಿರೋಧ: ಶಿವಸೇನಾಗೆ ಬೆಂಬಲ ನೀಡಲು ಸಿದ್ಧವೆಂದ ಬಿಜೆಪಿ ನಾಯಕ

ಅಗತ್ಯ ಬಿದ್ದರೆ ಸರ್ಕಾರಕ್ಕೆ ಬೆಂಬಲ ನೀಡ್ತೇವೆಂದ ಸುಧೀರ್ ಮುಂಗತಿವಾರ್

ಏಜೆನ್ಸೀಸ್
Published 4 ಮಾರ್ಚ್ 2020, 4:19 IST
Last Updated 4 ಮಾರ್ಚ್ 2020, 4:19 IST
ಸುಧೀರ್ ಮುಂಗತಿವಾರ್ (ಸಂಗ್ರಹ ಚಿತ್ರ)
ಸುಧೀರ್ ಮುಂಗತಿವಾರ್ (ಸಂಗ್ರಹ ಚಿತ್ರ)   

ಮುಂಬೈ: ಮುಸ್ಲಿಮರಿಗೆ ಮೀಸಲಾತಿ ನೀಡಲು ಮುಂದಾಗದಿರುವ ವಿಚಾರವಾಗಿ ಕಾಂಗ್ರೆಸ್, ಎನ್‌ಸಿಪಿ ಪಕ್ಷಗಳು ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದರೆ ಶಿವಸೇನಾಗೆ ಬೆಂಬಲ ನೀಡಲು ಸಿದ್ಧ ಎಂದು ಬಿಜೆಪಿ ನಾಯಕ ಸುಧೀರ್ ಮುಂಗತಿವಾರ್ ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಶೇ 5ರ ಮೀಸಲಾತಿ ನೀಡುವ ವಿಚಾರವಾಗಿ ‘ಮಹಾ ವಿಕಾಸ್ ಅಘಾಡಿ’ ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಊಹಾಪೋಹಗಳು ಸೃಷ್ಟಿಯಾಗಿರುವ ಸಂದರ್ಭದಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಮುಸ್ಲಿಮರಿಗೆ ಮೀಸಲಾತಿ ನೀಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದ್ದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಸುಧೀರ್, ‘ಉದ್ಧವ್ ಅವರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಶಿವಸೇನಾ ಜತೆ ನಮ್ಮ ಮೈತ್ರಿಯು ಸಿದ್ಧಾಂತದ ತಳಹದಿಯಿಂದ ಕೂಡಿತ್ತು. ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಒತ್ತಡದ ಬಗ್ಗೆ ಸೇನಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರು ಸರ್ಕಾರದಿಂದ ಹೊರನಡೆದರೂ ಈ ವಿಚಾರದಲ್ಲಿ ಸರ್ಕಾರಕ್ಕೆ ನಾವು ಬೆಂಬಲ ನೀಡಲಿದ್ದೇವೆ’ ಎಂದು ಹೇಳಿದ್ದಾರೆ.

ಧರ್ಮದ ಆಧಾರದಲ್ಲಿ ಮೀಸಲಾತಿ ಯಾಕೆ ನೀಡಬೇಕು ಎಂದೂ ಅವರು ಪ್ರಶ್ನಿಸಿದ್ದಾರೆ.

‘ಮಹಾರಾಷ್ಟ್ರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ 5ರಷ್ಟು ಮೀಸಲಾತಿ ನೀಡಲಾಗುವುದು’ ಎಂದು ಮಹಾರಾಷ್ಟ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ನವಾಬ್‌ ಮಲಿಕ್‌ ಇತ್ತೀಚೆಗೆ ತಿಳಿಸಿದ್ದರು. ಇದಕ್ಕೆ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ, ಈ ವಿಚಾರವಾಗಿ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಮಹಾರಾಷ್ಟ್ರದ ಸಚಿವ ಏಕನಾಥ್‌ ಶಿಂಧೆ ಸ್ಪಷ್ಟಪಡಿಸಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.