ADVERTISEMENT

ಶಬರಿಗಿರಿ ಶಾಂತ,ಕೇರಳ ಉದ್ವಿಗ್ನ

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಂಧನ ವಿರೋಧಿಸಿ ಪ್ರತಿಭಟನೆ

ಪಿಟಿಐ
Published 18 ನವೆಂಬರ್ 2018, 19:28 IST
Last Updated 18 ನವೆಂಬರ್ 2018, 19:28 IST
ಸುರೇಂದ್ರನ್‌ ಬಂಧನ ಖಂಡಿಸಿ ಕೊಚ್ಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು 
ಸುರೇಂದ್ರನ್‌ ಬಂಧನ ಖಂಡಿಸಿ ಕೊಚ್ಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು    

ತಿರುವನಂತಪುರ: ಪೊಲೀಸರ ಆಕ್ಷೇಪವನ್ನು ಕಡೆಗಣಿಸಿ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯತ್ನಿಸಿದ ಬಿಜೆಪಿ ಕೇರಳ ಘಟ
ಕದ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್‌ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ತಡರಾತ್ರಿ ಬಂಧಿಸಲಾಯಿತು. ಇದರಿಂದ ಆಕ್ರೋಶಗೊಂಡಿರುವ ಬಿಜೆಪಿ ಕಾರ್ಯಕರ್ತರು ಕೇರಳದಾದ್ಯಂತ ಭಾನುವಾರ ಪ್ರತಿಭಟನೆ ಹಾಗೂ ಹೆದ್ದಾರಿ ತಡೆ ನಡೆಸಿದ್ದಾರೆ.

ಶಬರಿಮಲೆ ಭಾನುವಾರ ಶಾಂತವಾಗಿತ್ತು. ಭಕ್ತರು ಯಾವುದೇ ಅಡ್ಡಿ ಇಲ್ಲದೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಸುರೇಂದ್ರನ್‌ ಬಂಧನ ವಿರೋಧಿಸಿ ಬಿಜೆಪಿ ಭಾನುವಾರ ಪ್ರತಿಭಟನಾ ದಿನಕ್ಕೆ ಕರೆ ನೀಡಿತ್ತು. ತಿರುವನಂತಪುರ, ಕೊಚ್ಚಿ, ತ್ರಿಶೂರ್‌, ಪಾಲಕ್ಕಾಡ್‌, ಕಾಸರಗೋಡು ಜಿಲ್ಲೆಯ ಉತ್ತರ ಭಾಗಗಳಲ್ಲಿ ಪ್ರತಿಭಟನೆ ತೀವ್ರವಾಗಿತ್ತು. ಬಹುತೇಕ ಕಡೆ ವಾಹನ ಸಂಚಾರ ಬಂದ್‌ ಆಗಿತ್ತು. ಸುರೇಂದ್ರನ್‌ ಅವರನ್ನು ಇರಿಸಿರುವ ಕೊಟ್ಟಾರಕರ ಉಪ ಕಾರಾಗೃಹದ ಎದುರೂ ಪ್ರತಿಭಟನೆ ನಡೆಯಿತು.

ADVERTISEMENT

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಎಂ.ಎಸ್‌.ಕುಮಾರ್‌, ‘ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆದರೆ ಈವರೆಗೆ, ಯಾವುದೇ ಮಹಿಳೆಗೆ ಅಯ್ಯಪ್ಪಸ್ವಾಮಿಯ ದರ್ಶನ ಮಾಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿಲ್ಲ. 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ದೇವಸ್ಥಾನದ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

ಹಿಂದೂ ಐಕ್ಯ ವೇದಿಯ ರಾಜ್ಯ ಅಧ್ಯಕ್ಷೆ ಕೆ.ಪಿ. ಶಶಿಕಲಾ ಅವರನ್ನು ವಶಕ್ಕೆ ಪಡೆದಿದ್ದಪೊಲೀಸರ ಕ್ರಮ ವಿರೋಧಿಸಿ ಶಬರಿಮಲೆ ಕರ್ಮ ಸಮಿತಿ ಮತ್ತು ಹಿಂದುತ್ವ ಪರ ಸಂಘಟನೆಗಳು ಶನಿವಾರ ಹರತಾಳಕ್ಕೆ ಕರೆ ನೀಡಿದ್ದವು. ಮರುದಿನ ಮತ್ತೆ ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಶಶಿಕಲಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ನ್ಯಾಯಾಂಗ ವಶಕ್ಕೆ

ಸುರೇಂದ್ರನ್‌ ಹಾಗೂ ಅವರೊಟ್ಟಿಗೆ ಇದ್ದ ಇಬ್ಬರನ್ನು ಭಾನುವಾರಪಟ್ಟನಂತಿಟ್ಟ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲಾಯಿತು. ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಯ್ಯಪ್ಪ ದರ್ಶನ ಸುಗಮ

ಶಬರಿಮಲೆ:ಎರಡು ತಿಂಗಳವರೆಗೆ ನಡೆಯುವ ಮಂಡಲ ಪೂಜೆಗಾಗಿ ಬಾಗಿಲು ತೆರೆದಿರುವ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಎರಡನೇ ದಿನ ದೇವರ ದರ್ಶನ ಸುಗಮವಾಗಿ ನಡೆಯಿತು.

ಕೇರಳಕ್ಕಿಂತ ಹೊರ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜನರು ಕಡಿಮೆ ಸಂಖ್ಯೆಯಲ್ಲಿದ್ದರೂ ದೇವರ ಸನ್ನಿಧಾನದ ಸಮೀಪ ಹೆಚ್ಚಿನ ಸಮಯ ಕಳೆಯಲು ಅವಕಾಶ ನೀಡಲಿಲ್ಲ ಎಂದು ಭಕ್ತರು ಅಸಮಾಧಾನ ಹೊರಹಾಕಿದರು. ನಿಲಕ್ಕಲ್‌ನಿಂದ 18 ಕಿ.ಮೀ. ದೂರದ ಪಂಪಾವರೆಗೆ ಬರಲು 2 ಗಂಟೆ ಬೇಕಾಯಿತು ಎಂದು ಕೆಲವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.