
ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಂತೆ ಕೋರಿ ಬಿಜೆಪಿ ಕಾರ್ಯಕರ್ತರು ಅರ್ಜಿ ಸಲ್ಲಿಸುತ್ತಿದ್ದು, ಇದಕ್ಕೆ ಅವರು ‘ಕೇಂದ್ರೀಕೃತ ಹಾಗೂ ಸಂಘಟಿತ’ ವಿಧಾನ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.
ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್‌ಐಆರ್) ನಡೆಯುತ್ತಿರುವ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಇಂತಹ ಕೆಲಸ ನಡೆಯುತ್ತಿದ್ದು, ಅರ್ಜಿ ಸಲ್ಲಿಸುವಾಗ ಸ್ಪಷ್ಟವಾದ ವಿವರಗಳನ್ನು ನೀಡುತ್ತಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.
‘ಇಂತಹ ನಡೆಯು ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ಸಂಶಯ ಮೂಡುವಂತೆ ಮಾಡುತ್ತಿದೆ. ಅರ್ಜಿ ನಮೂನೆ–7ರ ದುರ್ಬಳಕೆ ತಡೆಯುವುದೂ ಅಗತ್ಯ. ಹಾಗಾಗಿ, ಮತದಾರರ ಹೆಸರುಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಮೇಲೆ ನಿರಂತರ ಕಣ್ಗಾವಲು ಇಡಬೇಕು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
Quote - ಅರ್ಜಿ ನಮೂನೆ–7ರ ದುರ್ಬಳಕೆ ಹಾಗೂ ಮತದಾರರ ಹೆಸರು ಅಳಿಸಿ ಹಾಕುವ ವಿಧಾನ ಕುರಿತ ಆರೋಪಗಳ ಬಗ್ಗೆ ಸಂವಿಧಾನದ 324ನೇ ವಿಧಿಯಡಿ ಚುನಾವಣಾ ಆಯೋಗ ತನಿಖೆ ನಡೆಸಬೇಕು ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪತ್ರದಲ್ಲಿನ ಪ್ರಮುಖ ಅಂಶಗಳು
* ಬಿಜೆಪಿ ಕಾರ್ಯಕರ್ತರ ಈ ಕೆಲಸಕ್ಕೆ ಕಡಿವಾಣ ಹಾಕದಿದ್ದರೆ ವಾಮಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಅವರ ಪ್ರಯತ್ನಗಳಿಗೆ ಅನುಕೂಲ ಮಾಡಿಕೊಟ್ಟಂತಾಗಲಿದೆ
* ಲಕ್ಷಾಂತರ ಜನರ ಅದರಲ್ಲೂ ವಿಶೇಷವಾಗಿ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯಗಳಿಗೆ ಸೇರಿದವರು ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯ ಇದೆ
* ಅನೇಕ ಅರ್ಜಿ ನಮೂನೆ–7ರಲ್ಲಿನ ಹೆಸರುಗಳನ್ನು ಓದುವುದಕ್ಕೆ ಆಗುತ್ತಿಲ್ಲ. ಮೊಬೈಲ್ ಸಂಖ್ಯೆಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸಿದವರ ವಿವರಗಳಿಗೂ ಹಾಗೂ ಎಪಿಕ್ ಸಂಖ್ಯೆಗೂ ಹೊಂದಾಣಿಕೆ ಆಗುತ್ತಿಲ್ಲ
* ಎಸ್‌ಸಿ ಎಸ್‌ಟಿ ಅಲ್ಪಸಂಖ್ಯಾತರು ಹಾಗೂ ಹಿರಿಯ ನಾಗರಿಕರು ಸೇರಿ ನಿರ್ದಿಷ್ಟ ವರ್ಗದ ಮತದಾರರ ವಿರುದ್ಧ ಸಾಮೂಹಿಕವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ. ಈ ಆಕ್ಷೇಪಣಾ ಅರ್ಜಿಗಳನ್ನು ‘ಕೇಂದ್ರೀಕೃತ ವ್ಯವಸ್ಥೆ’ ಮೂಲಕ ಸಿದ್ಧಪಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ
* ಎಸ್‌ಐಆರ್ ನಡೆಯುತ್ತಿರುವ ಎಲ್ಲ 12 ರಾಜ್ಯಗಳಲ್ಲಿ ಸಲ್ಲಿಕೆಯಾಗಿರುವ ನಮೂನೆ–7ಕ್ಕೆ ಸಂಬಂಧಿಸಿದ ಸಮಗ್ರ ದತ್ತಾಂಶವನ್ನು ಬಹಿರಂಗಪಡಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.