ADVERTISEMENT

ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತನ ಪತ್ನಿ ಮೇಲೆ ಐವರ ಅತ್ಯಾಚಾರ

ಪಿಟಿಐ
Published 9 ಆಗಸ್ಟ್ 2021, 16:05 IST
Last Updated 9 ಆಗಸ್ಟ್ 2021, 16:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೌರಾ: ತೃಣಮೂಲ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಹೌರಾ ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಶನಿವಾರ ರಾತ್ರಿ ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ‌

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿರುವ ಟಿಎಂಸಿಯು, ಪಕ್ಷ ಸಂತ್ರಸ್ತೆಯ ಕುಟುಂಬದ ಪರ ಇರುವುದಾಗಿ ತಿಳಿಸಿದೆ.

ADVERTISEMENT

ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಐವರ ಪೈಕಿ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ. ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆ ಪ್ರಸ್ತುತ ಉಲುಬೇರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಮನೆಗೆ ಭದ್ರತೆ ಒದಗಿಸಲಾಗಿದೆ.

‘34 ವರ್ಷದ ಬಿಜೆಪಿ ಕಾರ್ಯಕರ್ತನ ಪತ್ನಿಯನ್ನು ಹೌರಾ ಜಿಲ್ಲೆಯ ಬಗ್ನಾನ್ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರು ಕಟ್ಟಿಹಾಕಿ, ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ,’ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ಸಹ-ಉಸ್ತುವಾರಿ ಅಮಿತ್ ಮಾಳವೀಯ ಅವರು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಹೌರಾ ಜಿಲ್ಲಾಧ್ಯಕ್ಷ, ಸಚಿವ ಪುಲಕ್ ರಾಯ್, ‘ಅಪರಾಧಿಗಳಿಗೆ ಜಾತಿ, ಧರ್ಮವೆಂಬುದು ಇರಲಾರದು. ರಾಜ್ಯದಲ್ಲಿ ಎಲ್ಲ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ನಾವು ಸಂತ್ರಸ್ತ ಕುಟುಂಬದ ಪರವಾಗಿದ್ದೇವೆ. ಅಪರಾಧಿಗಳನ್ನು ಶಿಕ್ಷಿಸಬೇಕೆಂದು ನಾವು ಒತ್ತಾಯಿಸುತ್ತೇವೆ’ ಎಂದು ರಾಯ್ ಹೇಳಿದ್ದಾರೆ.

ಸಂತ್ರಸ್ತ ಮಹಿಳೆ ಆರು ವರ್ಷಗಳ ಹಿಂದೆ ಮೆದುಳಿನ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಹೀಗಾಗಿ ಅವರು ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಆಕೆಯ ಪತಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ವ್ಯಾಪಾರ ಮಾಡುತ್ತಿದ್ದು, ಕೆಲಸದ ನಿಮಿತ್ತ ಶನಿವಾರ ಕೋಲ್ಕತ್ತಕ್ಕೆ ತೆರಳಿದ್ದರು. ಆದರೆ, ಹಿಂದಿರುಗಿರಲಿಲ್ಲ. ಅದೇ ದಿನ ರಾತ್ರಿ ಕೆಲವರು ಮಹಿಳೆಯನ್ನು ಆಕೆಯ ಅಡ್ಡಹೆಸರಿನಿಂದ ಕರೆದಿದ್ದಾರೆ. ಬಾಗಿಲು ತೆರೆದಾಗ ಏಕಾಏಕಿ ಮನೆಗೆ ನುಗ್ಗಿರುವ ಐವರು, ಆಕೆಯನ್ನು ಥಳಿಸಿ, ಕಟ್ಟಿ ಹಾಕಿ ಅತ್ಯಾಚಾರ ನಡೆಸಿದ್ದಾರೆ. ಕೃತ್ಯದ ನಂತರ ಮಹಿಳೆ ಕಾಲುಗಳ ಮೇಲೆ ಮೋಟಾರ್ ಬೈಕ್ ಹರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.