ADVERTISEMENT

ಅಳಿವಿನಂಚಿನಲ್ಲಿರುವ ಜೆಡಿಎಸ್‌ ಚುನಾವಣೆ ನಂತರ ನಿರ್ನಾಮವಾಗಲಿದೆ: ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 6:34 IST
Last Updated 2 ಜನವರಿ 2023, 6:34 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ    

ಬೆಂಗಳೂರು: ಜೆಡಿಎಸ್ ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷವಾಗಿ ಮಾರ್ಪಟ್ಟಿದೆ. ಚುನಾವಣೆ ನಂತರ ಜೆಡಿಎಸ್ ಕರ್ನಾಟಕದಿಂದ ನಿರ್ನಾಮವಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಬಿಜೆಪಿಯ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಅಮಿತ್‌ ಶಾ ಅವರು, ‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮಂಡ್ಯ ಒಂದು ಕುಟುಂಬದ ಎಟಿಎಂ ಆಗಲಿದೆ’ ಎಂದು ಟೀಕಿಸಿದ್ದರು. ಇದಕ್ಕೆ ಟ್ವಿಟರ್‌ ಮೂಲಕ ತಿರುಗೇಟು ನೀಡಿದ್ದ ಕುಮಾರಸ್ವಾಮಿ, ‘ಅಮಿತ್ ಶಾ ಅವರೇ, ನೀವು ಸರ್ವಾಧಿಕಾರಿ ಹಿಟ್ಲರನ ಸಂಪುಟದ ಗೊಬೆಲ್ಲನ ಹೊಸ ಅವತಾರ’ ಎಂದು ಮೂದಲಿಸಿದ್ದರು.

ಕುಮಾರಸ್ವಾಮಿ ಅವರ ಈ ಹೇಳಿಕೆಗೆ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉಲ್ಲೇಖಿಸಿ ಎಚ್‌.ಡಿ ಕುಮಾರಸ್ವಾಮಿ ಅವರು ಬಳಸಿರುವ ಅಸಂಸದೀಯ ಪದ, ಅವರ ರಾಜಕೀಯ ಹತಾಶೆಯನ್ನು ಪ್ರತಿಬಿಂಬಿಸುತ್ತಿದೆ. ಜೆಡಿಎಸ್ ಪಕ್ಷ ಈಗಾಗಲೇ ಅಳಿವಿನಂಚಿನಲ್ಲಿದೆ. ಚುನಾವಣೆ ನಂತರ ಜೆಡಿಎಸ್ ಕರ್ನಾಟಕದಿಂದ ನಿರ್ನಾಮವಾಗಲಿದೆ’ ಎಂದು ಅವರು ಭವಿಷ್ಯ ನುಡಿದ್ದಾರೆ.

ADVERTISEMENT

ಏನಾಗಿತ್ತು ಕುಮಾರಸ್ವಾಮಿ ಟೀಕೆ

’ಅಮಿತ್ ಶಾ ಅವರೇ, ನೀವು ಸರ್ವಾಧಿಕಾರಿ ಹಿಟ್ಲರನ ಸಂಪುಟದ ಗೊಬೆಲ್ಲನ ಹೊಸ ಅವತಾರ! ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಕರ್ಮ ನಿಮಗೇಕೆ ಬಂತು? ಜೆಡಿಎಸ್ ಗೆದ್ದರೆ ಕರ್ನಾಟಕ ಒಂದು ಕುಟುಂಬದ ಎಟಿಎಂ ಆಗುತ್ತದೆಂದು ಜಾಗಟೆ ಹೊಡೆದಿದ್ದೀರಿ. ಜೆಡಿಎಸ್ ಸರ್ಕಾರ ಬಂದರೆ, ಅದು ಆರೂವರೆ ಕೋಟಿ ಕನ್ನಡಿಗರ ಎಟಿಎಂ ಆಗುತ್ತದೆ. ರೈತರ, ಕಾರ್ಮಿಕರ, ದೀನ ದಲಿತರ, ಅಶಕ್ತರ, ವಿಕಲಚೇತನರ ಎಟಿಎಂ ಆಗುತ್ತದೆ‘ ಎಂದು ಎಚ್‌ಡಿಕೆ ಕುಟುಕಿದ್ದರು.

’ಜೆಡಿಎಸ್ ಜನರ ಎಟಿಎಂ. ನಮ್ಮ ಪಾಲಿಗೆ ಎಟಿಎಂ ಎಂದರೆ ’ಎನಿ ಟೈಮ್ ಮನುಷ್ಯತ್ವ’ ಎಂದು. ನಿಮ್ಮ ಪಾಲಿಗೆ ಅದು 'ಎನಿ ಟೈಮ್ ಮೋಸ'. ಸುಳ್ಳಿನ ಜಾಗಟೆ ಹೊಡೆದೇ ದೇಶವನ್ನು ಅಧೋಗತಿಗೆ ತಳ್ಳಿದ್ದೀರಿ. ಶಾ ಅವರೇ, ದೇಶದ ಮಾತು ಹಾಗಿರಲಿ, ಕರ್ನಾಟಕದಲ್ಲಿ ನಿಮ್ಮ ಪಕ್ಷದ ಎಟಿಎಂಗಳ ಪಟ್ಟಿ ಮೂಡಿದೆ ನೋಡಿ‘ ಎಂದು ಕುಮಾರಸ್ವಾಮಿ ಗುಡುಗಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.