ADVERTISEMENT

ಬಿಜೆಪಿ ನಾಯಕಿ ಸೊನಾಲಿ ಫೋಗಟ್‌ ಬಲವಂತ ಡ್ರಗ್‌ ಸೇವನೆ: ಇಬ್ಬರು ಪೊಲೀಸ್‌ ವಶಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2022, 14:07 IST
Last Updated 26 ಆಗಸ್ಟ್ 2022, 14:07 IST
ಸೊನಾಲಿ ಫೋಗಟ್‌
ಸೊನಾಲಿ ಫೋಗಟ್‌   

ಪಣಜಿ: ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್‌ ಅವರಿಗೆ ಉತ್ತರ ಗೋವಾದ ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಯ ವೇಳೆ ಇಬ್ಬರು ಆರೋಪಿಗಳು ಮಾದಕ ವಸ್ತು ಬೆರೆಸಿದ ಪಾನೀಯ ನೀಡಿದ್ದರು. ಇದನ್ನು ಕುಡಿದಿರುವುದೇ ಅವರ ಸಾವಿಗೆ ಕಾರಣವಾಯಿತು ಎಂದು ಗೋವಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

‘ಹಣಕಾಸಿನ ವಿಚಾರದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು’ ಎಂದು ಐಜಿಪಿ ಓಂವೀರ್ ಸಿಂಗ್ ಬಿಷ್ಣೋಯ್ ಹೇಳಿದ್ದಾರೆ.

ಕೊಲೆ ಆರೋಪದ ಮೇಲೆ ಸೋನಾಲಿ ಅವರ ಸಿಬ್ಬಂದಿ ಸುಧೀರ್‌ ಸಂಗ್ವಾನ್‌ ಮತ್ತು ಸುಖ್ವಿಂದರ್‌ ಸಿಂಗ್‌ ಎಂಬುವವರನ್ನು ಬಂಧಿಸಲಾಗಿದೆ. ಇವರಿಬ್ಬರು ಆ. 22 ರಂದು ಸೋನಾಲಿ ಅವರೊಂದಿಗೆ ಗೋವಾಕ್ಕೆ ಬಂದಿದ್ದರು.

‘ಮಾದಕ ವಸ್ತು ಬೆರಸಿದ ಪಾನೀಯವನ್ನು ಎರಡು ಬಾರಿ ಸೋನಾಲಿ ಅವರಿಗೆ ನೀಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದೂ ಓಂವೀರ್ ಸಿಂಗ್ ತಿಳಿಸಿದ್ದಾರೆ.

‘ಆರೋಪಿ ಸುಧೀರ್‌ ಸಂಗ್ವಾನ್‌ ಮಾದಕ ವಸ್ತು ಬೆರೆಸಿದ್ದ ಪಾನೀಯವನ್ನು ನೀರಿನ ಬಾಟಲಿಯಲ್ಲಿ ಸೋನಾಲಿ ಅವರಿಗೆ ಬಲವಂತವಾಗಿ ಕುಡಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದ ದೃಶ್ಯದಲ್ಲಿ ಸೆರೆಯಾಗಿದೆ’ ಎಂದೂ ವಿವರಿಸಿದ್ದಾರೆ.

‘ಆ. 23ರಂದು ಬೆಳಿಗ್ಗೆ 4.30ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಸೋನಾಲಿ ಅವರನ್ನು ಕರ್ಲೀಸ್‌ ರೆಸ್ಟೋರೆಂಟ್‌ನ ಸ್ನಾನಗೃಹಕ್ಕೆ ಕರೆದೊಯ್ದಿರುವುದು ಕೂಡ ಸಿಸಿಟಿವಿ ಕ್ಯಾಮೆರಾದ ದೃಶ್ಯದಲ್ಲಿ ದಾಖಲಾಗಿದೆ. ಎರಡು ಗಂಟೆಗಳ ಕಾಲ ಅವರು ಸ್ನಾನಗೃಹದೊಳಗೆ ಇದ್ದರು. ಈ ಕುರಿತು ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಹೇಳಿದ್ದಾರೆ.

ಹರಿಯಾಣದಲ್ಲಿ ಅಂತ್ಯಕ್ರಿಯೆ: ಹರಿಯಾಣದ ರಿಷಿ ನಗರದ ಸ್ಮಶಾನದಲ್ಲಿ ಸೋನಾಲಿ ಫೋಗಾಟ್‌ ಅವರ ಅಂತ್ಯಕ್ರಿಯೆ ನೆರವೇರಿತು. ಮಗಳು ಯಶೋಧರ ಹಾಗೂ ಕುಟುಂಬ ಸದಸ್ಯರು ಕಣ್ಣೀರಿನ ವಿದಾಯ ಹೇಳಿದರು.

ಗುರುವಾರ ರಾತ್ರಿ ಸೋನಾಲಿ ಮೃತದೇಹವನ್ನು ಗೋವಾದಿಂದ ದೆಹಲಿ ಮೂಲಕ ತರಲಾಯಿತು. ಬೆಳಿಗ್ಗೆ ಅವರ ತೋಟದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

’ಶುಕ್ರವಾರ ಮುಖ್ಯಮಂತ್ರಿ ಮನೋಹರ್ ಲಾಲ್ ಅವರೊಂದಿಗೆ ಮಾತನಾಡಿದ್ದು, ಆಕೆಯ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದೇನೆ’ ಎಂದು ಬಿಜೆಪಿ ನಾಯಕ ಕುಲದೀಪ್ ಬಿಷ್ಣೋಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.