ಪ್ರಾತಿನಿಧಿಕ ಚಿತ್ರ
ಥಾಣೆ: ಸಂಬಂಧಿಯೊಬ್ಬರ ಮದುವೆಗೆ ನೆರವಾಗುವ ಸಲುವಾಗಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯಿಂದ ನಗ್ನವಾಗಿ ವಾಮಾಚಾರ ಮಾಡಿಸಿರುವ ಹಾಗೂ ಆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಆಘಾತಕಾರಿ ಘಟನೆ ನವಿ ಮುಂಬೈನಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಸಂಬಂಧ ವಶಿ ಪೊಲೀಸ್ ಠಾಣೆಯಲ್ಲಿ ಜುಲೈ 3ರಂದು ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಘಟನೆಯು ಇದೇ ವರ್ಷ ಏಪ್ರಿಲ್ ಹಾಗೂ ಜುಲೈ ನಡುವೆ ಆರೋಪಿಯ ಮನೆಯಲ್ಲೇ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶ ದೇವರಿಯಾದವನಾದ ಆರೋಪಿಯು, ಸಂಬಂಧಿಯ ಮದುವೆಗೆ ಸಹಾಯ ಮಾಡುವ ಉದ್ದೇಶದಿಂದ ಪತ್ನಿ ಹಾಗೂ ಅವರ ತಾಯಿಯನ್ನು ನಗ್ನವಾಗಿ ಕೆಲವು ರೀತಿ ಆಚರಣೆಗಳಲ್ಲಿ ತೊಡಗಿಕೊಳ್ಳುವಂತೆ ಏಪ್ರಿಲ್ 15ರಂದು ಒತ್ತಾಯಿಸಿದ್ದ ಎಂದಿದ್ದಾರೆ.
'ಆಚರಣೆ ವೇಳೆ ಫೋಟೊ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ ಆರೋಪಿ, ನಂತರ ಅವರನ್ನು ಅಜ್ಮೇರ್‌ಗೆ ಬರುವಂತೆ ಹೇಳಿದ್ದ. ಅಲ್ಲಿಗೆ ಬಂದ ನಂತರ ಫೋಟೊಗಳನ್ನು ಆಕೆಯ (ಪತ್ನಿಯ) ತಂದೆ ಹಾಗೂ ಸಹೋದರ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ' ಎಂಬುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್), ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಹಾರಾಷ್ಟ್ರ ವಾಮಾಚಾರ, ನರಬಲಿ, ಅಮಾನವೀಯ ಹಾಗೂ ಅಘೋರಿ ಆಚರಣೆಗಳ ನಿಷೇಧ ಕಾಯ್ದೆ 2013ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಬಂಧಿಯ ಮದುವೆಗೆ ಯಾವ ರೀತಿಯಲ್ಲಿ ನೆರವಾಗುವುದು ಆರೋಪಿಯ ಉದ್ದೇಶವಾಗಿತ್ತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.