
ನವದೆಹಲಿ: ದೇಶದ ವಿವಿಧೆಡೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಸಾವಿನ ಕುರಿತು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
‘ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಬಿಎಲ್‌ಒ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಾದ್ಯಂತ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ. ಮತದಾರರ ಪಟ್ಟಿಯಲ್ಲಿ ಒಬ್ಬ ನುಸುಳುಕೋರನ ಹೆಸರು ಇರುವುದು ಸರಿಯಲ್ಲ ಎಂದಾದಲ್ಲಿ, 33 ಬಿಎಲ್‌ಒಗಳು ಮೃತಪಟ್ಟರೆ ಅದು ಸರಿಯೇ’ ಎಂದು ಸಿಬಲ್ ಅವರು ‘ಎಕ್ಸ್’ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
‘ಕೇಂದ್ರ ಸರ್ಕಾರವು ದೇಶದಿಂದ ನುಸುಳುಕೋರರನ್ನು ಹೊರಹಾಕಲಿದೆ. ಮತದಾರರ ಪಟ್ಟಿಯಲ್ಲಿ ನುಸುಳುಕೋರರ ಹೆಸರುಗಳು ಉಳಿಯಬೇಕೆಂದು ಬಯಸುತ್ತಿರುವ ಕೆಲ ರಾಜಕೀಯ ಪಕ್ಷಗಳು ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸುತ್ತಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ತಿಂಗಳು ಆರೋಪಿಸಿದ್ದರು.
‘ಪಶ್ಚಿಮ ಬಂಗಾಳದ ರಾಣಿಬಂಧ್ ಬ್ಲಾಕ್‌ನ ಬಿಎಲ್‌ಒ ಹರಧನ್ ಮಂಡಲ್ ಎಂಬವರು ಮೃತಪಟ್ಟಿದ್ದು, ಭಾನುವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಮೃತರ ಸಹಿ ಹೊಂದಿರುವ ಪತ್ರ ಸಿಕ್ಕಿದ್ದು, ಅದರಲ್ಲಿ ಅವರು ಬಿಎಲ್‌ಒ ಕೆಲಸದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.