ADVERTISEMENT

₹92 ಸಾವಿರ ಕೋಟಿ ವಸೂಲಿಗೆ ‘ಸುಪ್ರೀಂ’ ಅಸ್ತು

ದೂರಸಂಪರ್ಕ ಕಂಪನಿಗಳಿಗೆ ಹಿನ್ನಡೆಯಾದ ಅನುಮತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 18:48 IST
Last Updated 24 ಅಕ್ಟೋಬರ್ 2019, 18:48 IST
   

ನವದೆಹಲಿ: ದೂರ ಸಂಪರ್ಕ ಕಂಪನಿಗಳ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಅಂದಾಜು ₹92,000 ಕೋಟಿ ವಸೂಲಿ ಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್‌.ಎ.ನಜೀರ್‌ ಮತ್ತು ಎಂ.ಆರ್‌.ಶಾ ಅವರಿದ್ದ ನ್ಯಾಯಪೀಠವು ದೂರಸಂಪರ್ಕ ಇಲಾಖೆ (ಡಿಒಟಿ) ಪ್ರತಿಪಾದಿಸಿರುವ ಒಟ್ಟು ಆದಾಯದ ಲೆಕ್ಕಾಚಾರವನ್ನು ಎತ್ತಿಹಿಡಿದಿದೆ.

ಈ ಕುರಿತು ಕೇಂದ್ರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದ್ದರಿಂದ ದೂರಸಂಪರ್ಕ ಸೇವೆ ಪೂರೈಕೆದಾರರಿಗೆ ಹಿನ್ನಡೆಯಾಗಿದೆ.

ADVERTISEMENT

ಇಲಾಖೆ ಹಾಗೂ ಕಂಪನಿಗಳ ನಡುವಿನ 14 ವರ್ಷಗಳ ಕಾನೂನು ಹೋರಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಎಜಿಆರ್‌ದಿಂದ ಬರುವ ಹಣವನ್ನು ಗ್ರಾಮೀಣ, ಬುಡಕಟ್ಟು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ದೂರಸಂಪರ್ಕ ಸೇವೆ ಅಭಿವೃದ್ಧಿಗೆ ಬಳಸುವ ಸರ್ಕಾರದ ಉದ್ದೇಶವನ್ನು ನ್ಯಾಯಪೀಠ ಪರಿಗಣಿಸಿದೆ.

ಪ್ರಮುಖ ಕಂಪನಿಗಳ ಷೇರುಗಳು ಮಾರುಕಟ್ಟೆಯಲ್ಲಿ ಕುಸಿದಿದ್ದರಿಂದ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದೂರಸಂಪರ್ಕ ಕ್ಷೇತ್ರಕ್ಕೆ ಈ ತೀರ್ಪು ದೊಡ್ಡ ಆಘಾತ ನೀಡಿದೆ. ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಮಾರ್ಗವೊಂದನ್ನು ಕಂಡು ಹಿಡಿಯಬೇಕು ಎಂದು ಕೇಂದ್ರ ಸರ್ಕಾರವನ್ನು ದೂರಸಂಪರ್ಕ ಕಂಪನಿಗಳು ಒತ್ತಾಯಿಸಿವೆ.

ಈ ಹಣ ಪಾವತಿಸಲು ಕನಿಷ್ಠ ಆರು ತಿಂಗಳ ಸಮಯ ಬೇಕಾಗಬಹುದು ಎಂದು ದೂರಸಂಪರ್ಕ ಕಂಪನಿಗಳು ಹೇಳಿದ್ದರಿಂದ ದಂಡ ಮತ್ತು ಬಡ್ಡಿಯೊಂದಿಗೆ ಹಣ ಪಾವತಿಸಲು ನಿಗದಿ ಪಡಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಭಾರ್ತಿ ಏರ್‌ಟೆಲ್‌, ವೊಡಾಫೋನ್‌, ಎಂಟಿಎನ್‌ಎಲ್‌ ಮತ್ತು ಬಿಎಸ್‌ಎನ್‌ಎಲ್‌ ಸೇರಿದಂತೆ ಪ್ರಮುಖ ದೂರಸಂಪರ್ಕ ಕಂಪನಿಗಳು ₹92,641.61 ಕೋಟಿ ಪರವಾನಗಿ ಶುಲ್ಕವನ್ನು ಬಾಕಿ ಇರಿಸಿಕೊಂಡಿವೆ ಎಂದು ಕೇಂದ್ರವು ಜುಲೈ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.