ADVERTISEMENT

ದೇಹ ಅವಮಾನಿಸುವ ಹೇಳಿಕೆ ಒಪ್ಪಲಾಗದು: ಕೇರಳ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 14:33 IST
Last Updated 14 ಜನವರಿ 2025, 14:33 IST
ಕೇರಳ ಹೈಕೋರ್ಟ್‌
ಕೇರಳ ಹೈಕೋರ್ಟ್‌   

ತಿರುವನಂತಪುರ: ‘ವ್ಯಕ್ತಿಯ ದೇಹ ಕುರಿತು ಅವಹೇಳನಕಾರಿ ಮಾತುಗಳನ್ನಾಡುವುದು, ದ್ವಂದ್ವಾರ್ಥದ ಪದಗಳನ್ನು ಬಳಸುವುದನ್ನು ನಮ್ಮ ಸಮಾಜ ಒಪ್ಪುವುದಿಲ್ಲ’ ಎಂದು ಹೇಳಿರುವ ಕೇರಳ ಹೈಕೋರ್ಟ್‌, ಚೆಮ್ಮನೂರ್ ಜುವೆಲ್ಲರ್ಸ್‌ನ ಮಾಲೀಕ ಬಾಬಿ ಚೆಮ್ಮನೂರ್‌ ಅವರಿಗೆ ಮಂಗಳವಾರ ಜಾಮೀನು ನೀಡಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಕುನ್ಹಿಕೃಷ್ಣನ್, ‘ಮತ್ತೊಬ್ಬರ ಕುರಿತು ಹೇಳಿಕೆ ನೀಡುವಾಗ, ಟೀಕೆ ಮಾಡುವಾಗ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕು’ ಎಂದು ಎಚ್ಚರಿಸಿದರು.

ಬಹುಭಾಷಾ ನಟಿ ಹನಿ ರೋಸ್‌ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಬಾಬಿ ಅವರನ್ನು ಬಂಧಿಸಲಾಗಿತ್ತು.

ADVERTISEMENT

ನಟಿ ಕುರಿತು ದ್ವಂದ್ವಾರ್ಥದ ಶಬ್ದಗಳನ್ನು ಬಳಕೆ ಮಾಡಿದ್ದಕ್ಕಾಗಿ ಬಾಬಿ ಅವರನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತು.

‘ಈ ಜಾಮೀನು ಅರ್ಜಿ ವಿಚಾರಣೆಯನ್ನು ಮುಕ್ತಾಯಗೊಳಿಸುವುದಕ್ಕೂ ಮುನ್ನ ನಾನು ಈ ಮಾತುಗಳನ್ನು ಹೇಳಬೇಕಾದ ಅನಿವಾರ್ಯತೆ ಇದೆ. ‘ಬಹಳ ದಪ್ಪಗಿದ್ದೀರಿ, ಬಹಳ ಕುಳ್ಳಗೆ, ತೀರ ಎತ್ತರ, ಬಹಳ ಕಪ್ಪು ಬಣ್ಣ ಈ ರೀತಿ ಒಬ್ಬ ವ್ಯಕ್ತಿಯ ದೇಹ ಕುರಿತು ಹೇಳವುದನ್ನು ನಿಲ್ಲಿಸಬೇಕು. ನಾವು ಯಾರೂ ಪರಿಪೂರ್ಣರಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ನ್ಯಾಯಮೂರ್ತಿ ಹೇಳಿದರು.

ಆರೋಪಿಗೆ ಸ್ವಾಗತ: ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಾಬಿ ಚೆಮ್ಮನೂರ್ ಅವರನ್ನು ಸ್ವಾಗತಿಸುವುದಕ್ಕಾಗಿ ಕೊಚ್ಚಿಯ ಕಾಕನಾಡ್‌ನಲ್ಲಿರುವ ಜೈಲಿನ ಮುಂದೆ ಮಹಿಳೆಯರು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.

‘ಆಲ್‌ ಕೇರಳ ಮೆನ್ಸ್‌ ಅಸೋಸಿಯೇಷನ್‌’ ಅಡಿ ಜಮಾಯಿಸಿದ್ದವರ ಪೈಕಿ, ಬಹುತೇಕರು ಚೆಮ್ಮನೂರ್ ಸಮೂಹದ ವಿವಿಧ ಸಂಸ್ಥೆಗಳ ಸಿಬ್ಬಂದಿ ಎಂದು ಹೇಳಲಾಗಿದೆ.

ಬಾಬಿ ಅವರಿಗೆ ಬೆಂಬಲ ಕೋರುವ ಭಿತ್ತಿಫಲಕಗಳು ಹಾಗೂ ಹೂವುಗಳೊಂದಿಗೆ ಕಾದಿದ್ದ‌ರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.