ಬಂಧನ
(ಪ್ರಾತಿನಿಧಿಕ ಚಿತ್ರ)
ಹೈದರಾಬಾದ್: ಹೈದರಾಬಾದ್ ಮತ್ತು ದೇಶದ ಇತರ ಭಾಗಗಳಲ್ಲಿ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ ಶಂಕೆಯ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ಶನಿವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಹೈದರಾಬಾದ್‌ನ ವಾರಸಿಗುಡದ ಸೈಯದ್ ಸಮೀರ್ ಮತ್ತು ವಿಜಯನಗರದ ಸಿರಾಜ್–ಉರ್–ರೆಹಮಾನ್ ಎಂದು ಗುರುತಿಸಲಾಗಿದೆ.
ಈ ಇಬ್ಬರು ಸೌದಿ ಅರೇಬಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ ಹ್ಯಾಂಡ್ಲರ್‌ಗಳಿಂದ ನಿರ್ದೇಶನಗಳನ್ನು ಪಡೆಯುತ್ತಿದ್ದರು ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಹೈದರಾಬಾದ್‌ನಲ್ಲಿ ಸ್ಫೋಟಕವನ್ನು ಇಡುವ ಯೋಜನೆ ಹೊಂದಿದ್ದ ಶಂಕಿತರು, ಅಮೋನಿಯಂ ಸಲ್ಫೇಟ್ ಮತ್ತು ಅಲ್ಯುಮಿನಿಯಂ ಪೌಡರ್ ಸೇರಿದಂತೆ ಬಾಂಬ್ ತಯಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಿದ್ದರು. ಕಚ್ಚಾ ಬಾಂಬ್ ಪರೀಕ್ಷೆಗಾಗಿ ಸ್ಥಳವನ್ನೂ ಆಯ್ಕೆ ಮಾಡಿಕೊಂಡಿದ್ದರು ಎಂಬುದಾಗಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿರಾಜ್‌ನ ತಂದೆ ಮತ್ತು ಸಹೋದರ ವಿಜಯನಗರದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿ.ಟೆಕ್ ಪೂರ್ಣಗೊಳಿಸಿರುವ ಸಿರಾಜ್ ಹೈದರಾಬಾದ್‌ನ ಹಲವೆಡೆ ಕೆಲಸ ಮಾಡುತ್ತಿದ್ದ. ಬಾಂಬ್ ತಯಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದ ಎಂಬುದನ್ನು ಸಾಕ್ಷ್ಯಗಳು ದೃಢಪಡಿಸಿವೆ ಎಂದು ಹೇಳಿದ್ದಾರೆ.
ಗುಪ್ತಚರ ಅಧಿಕಾರಿಗಳು ಕಳೆದ ಆರು ತಿಂಗಳಿನಿಂದ ಸಿರಾಜ್ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಪಾಕಿಸ್ತಾನ ಪರ ಪೋಸ್ಟ್ ಹಂಚಿಕೊಳ್ಳುವುದನ್ನು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ಸಿರಾಜ್ ವಿಚಾರಣೆ ನಡೆಸಿದ ಬಳಿಕ ಕೃತ್ಯದಲ್ಲಿ ಸೈಯದ್ ಸಹಭಾಗಿತ್ವ ಇರುವುದು ಗೊತ್ತಾಗಿದೆ. ಈ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಸೈಯದ್‌ನನ್ನು ಬಂಧಿಸಿದ್ದಾರೆ. ಬಂಧಿತರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.