ADVERTISEMENT

ಅಹಮದಾಬಾದ್‌ | ಶಾಲೆಗಳಿಗೆ ಬೆದರಿಕೆ ಇ–ಮೇಲ್ ಬಂದಿದ್ದು ಪಾಕ್‌ನಿಂದ

​ಪ್ರಜಾವಾಣಿ ವಾರ್ತೆ
Published 10 ಮೇ 2024, 13:38 IST
Last Updated 10 ಮೇ 2024, 13:38 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಅಹಮದಾಬಾದ್‌: ಇದೇ ತಿಂಗಳ 6 ರಂದು ಅಹಮದಾಬಾದ್‌ನ 36ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ–ಮೇಲ್‌ ಕಳುಹಿಸಿದ್ದ ಆರೋಪಿಯ ಗುರುತು ಪತ್ತೆ ಹಚ್ಚಲಾಗಿದ್ದು, ಆತ ಪಾಕಿಸ್ತಾನದ ನಿವಾಸಿ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 

‘ಆರೋಪಿಯು ತೌಹೀದ್‌ ಲಿಯಾಕತ್‌ ಎಂಬ ನಕಲಿ ಹೆಸರಿಟ್ಟುಕೊಂಡು, ‘mail.ru’ ಎಂಬ ರಷ್ಯಾದ ಡೊಮೈನ್‌ ಮೂಲಕ ಇ–ಮೇಲ್‌ ಕಳುಹಿಸಿದ್ದಾನೆ. ಈತ ಹಮದ್‌ ಜಾವೇದ್‌ ಎಂಬ ಹೆಸರಿನಲ್ಲಿ ಪಾಕಿಸ್ತಾನದ ಫೈಸಲಾಬಾದ್‌ನಿಂದ ಕಾರ್ಯಾಚರಣೆ ನಡೆಸುತ್ತಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಅಲ್ಲದೆ, ಈತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಹೆಸರಿನ ಖಾತೆ ಹೊಂದಿದ್ದು, ಭಾರತ ವಿರೋಧಿ ಪೋಸ್ಟ್‌ಗಳನ್ನು ಹಂಚುತ್ತಿದ್ದ ಹಾಗೂ ಭಾರತೀಯರಲ್ಲಿ ಭಯ ಸೃಷ್ಟಿಸಲು ಯತ್ನಿಸುತ್ತಿದ್ದ’ ಎಂದು ಜಂಟಿ ಪೊಲೀಸ್‌ ಆಯುಕ್ತ ಶರದ್‌ ಸಿಂಘಾಲ್‌ ಹೇಳಿದ್ದಾರೆ. 

ADVERTISEMENT

ಮೇ 7ರಂದು ಗುಜರಾತ್‌ನಲ್ಲಿ ಮತದಾನ ನಿಗದಿಯಾಗಿದ್ದ ಕಾರಣ, ಮತದಾರರಲ್ಲಿ ಭಯ ಹಾಗೂ ಗೊಂದಲವನ್ನುಂಟು ಮಾಡುವ ದುರುದ್ದೇಶದಿಂದ ಆರೋಪಿಯು ಮತಗಟ್ಟೆ ಇರುವ ಶಾಲೆಗಳನ್ನು ಗುರಿಯಾಗಿಸಿಕೊಂಡು ಇ–ಮೇಲ್‌ಗಳನ್ನು ಕಳುಹಿಸಿರುವ ಸಾಧ್ಯತೆ ಇದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಗುಪ್ತಚರ ದಳ(ಐಬಿ), ಭಯೋತ್ಪಾದನೆ ನಿಗ್ರಹ ಪಡೆ(ಎಟಿಎಸ್), ರಾಷ್ಟ್ರೀಯ ತಾಂತ್ರಿಕ ಅಧ್ಯಯನ ಆಯೋಗ(ಎನ್‌ಟಿಆರ್‌ಒ) ಹಾಗೂ ಗೂಢಚಾರಿ ಸಂಸ್ಥೆ ‘ರಾ’ ಜೊತೆಗೆ ಜಂಟಿ ತನಿಖೆ ನಡೆಸುತ್ತಿದ್ದೇವೆ ಎಂದು ಸಿಂಘಾಲ್‌ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.