ನವದೆಹಲಿ: ಭಾರತೀಯ ವಾಯುಪ್ರದೇಶಕ್ಕೆ ಪ್ರವೇಶಿಸಿರುವ ಇರಾನ್ ಪ್ರಯಾಣಿಕ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ.
ಇರಾನ್‌ನಿಂದ ಚೀನಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಜೆಟ್‌ನಲ್ಲಿ ಬಾಂಬ್ ಬೆದರಿಕೆ ಬೆನ್ನಲ್ಲೇ ಭಾರತೀಯ ವಾಯುಪಡೆಯ ಸುಖೋಯ್ ಎಸ್‌ಯು-30ಎಂಕೆಐ ಫೈಟರ್ ಜೆಟ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ.
ಚೀನಾದತ್ತ ತೆರಳುತ್ತಿದ್ದ ಇರಾನ್ ವಿಮಾನವು ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸಿದಾಗ ಭಾರತೀಯ ವಾಯು ಸಂಚಾರ ನಿಯಂತ್ರಣದಿಂದ ಎಚ್ಚರಿಕೆ ಸಂದೇಶ ಕಳುಹಿಸಲಾಗಿದೆ. ಕೂಡಲೇ ಪಂಜಾಬ್ ಮತ್ತು ಜೋಧ್‌ಪುರ ವಾಯುನೆಲೆಗಳಿಂದ ಭಾರತೀಯ ವಾಯುಪಡೆಯ ಸುಖೋಯ್ ಫೈಟರ್ ಜೆಟ್‌ಗಳು ವಿಮಾನವನ್ನು ತಡೆಯಲು ಹರಸಾಹಸ ಪಡುತ್ತಿವೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.
ಬಾಂಬ್ ಬೆದರಿಕೆ ಯಾರಿಂದ ಬಂದಿದೆ ಎಂಬ ಬಗ್ಗೆ ಇರಾನ್ ವಿಮಾನಯಾನ ಸಂಸ್ಥೆಯು ಮಾಹಿತಿ ಹಂಚಿಕೊಂಡಿಲ್ಲ. ಭಾರತೀಯ ವಾಯುಪ್ರದೇಶದಲ್ಲಿರುವ ಇರಾನ್ ವಿಮಾನವು ಸದ್ಯ ಚೀನಾದತ್ತ ತೆರಳುತ್ತಿದೆ. ಭದ್ರತಾ ಸಂಸ್ಥೆಗಳು ವಿಮಾನದ ಮೇಲೆ ಕಣ್ಗಾವಲು ಇಟ್ಟಿವೆ.
ದೆಹಲಿಯ ಭದ್ರತಾ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಬಗ್ಗೆ ಮಾಹಿತಿ ಬಂದ ಬಳಿಕ ವಾಯುಪಡೆಯನ್ನು ಎಚ್ಚರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.