ಮುಂಬೈ: ಮನೋಜ್ ಜರಾಂಗೆ ನೇತೃತ್ವದ ಮರಾಠ ಮೀಸಲಾತಿ ಆಂದೋಲನ
ಮುಂಬೈ: ಮನೋಜ್ ಜರಾಂಗೆ ನೇತೃತ್ವದ ಮರಾಠ ಮೀಸಲಾತಿ ಆಂದೋಲನದಿಂದಾಗಿ ಇಡೀ ಮುಂಬೈ ನಗರ ಸ್ತಬ್ಧಗೊಂಡಿದೆ ಎಂದು ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನಗರದ ಆಜಾದ್ ಮೈದಾನದಲ್ಲಿ ನಾಲ್ಕು ದಿನಗಳಿಂದ ಜರಾಂಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಹೀಗಾಗಿ ಅವರ ಅಪಾರ ಬೆಂಬಲಿಗರು ನಗರದಲ್ಲಿ ಬೀಡು ಬಿಟ್ಟಿದ್ದಾರೆ.
ಜರಾಂಗೆ ಅವರ ಪ್ರತಿಭಟನೆಯು ಶಾಂತಿಯುತವಾಗಿಲ್ಲ ಮತ್ತು ಅವರ ಆಂದೋಲನ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿದೆ ಎಂದೂ ಸಿಡಿಮಿಡಿಗೊಂಡಿದೆ.
ಮುಂಬೈನಲ್ಲಿ ಸಹಜ ಸ್ಥಿತಿ ಮರುಸ್ಥಾಪನೆಯಾಗಬೇಕು ಎಂದು ಹೈಕೋರ್ಟ್ ಹೇಳಿದ್ದು ಮಂಗಳವಾರ (ಸೆ.2) ಮಧ್ಯಾಹ್ನದೊಳಗೆ ಪರಿಸ್ಥಿತಿಯನ್ನು ಸರಿಪಡಿಸುವಂತೆ ಮತ್ತು ಎಲ್ಲಾ ಬೀದಿಗಳನ್ನು ತೆರವುಗೊಳಿಸುವಂತೆ ಜರಾಂಗೆ ಮತ್ತು ಅವರ ಬೆಂಬಲಿಗರಿಗೆ ಸೂಚನೆ ನೀಡಿದೆ.
ಜರಾಂಗೆ ಅವರು ಸೋಮವಾರ ನೀರು ಕುಡಿಯುವುದನ್ನೂ ನಿಲ್ಲಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
‘ಸಿಎಂ ಫಡಣವೀಸ್ ಉದ್ದೇಶಪೂರ್ವಕವಾಗಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದ್ದಾರೆ’ ಎಂದು ಜರಾಂಗೆ ಆರೋಪಿಸಿದರು.
ಮರಾಠಾ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡಬೇಕು ಎಂಬುದು ಅವರ ಆಗ್ರಹವಾಗಿದೆ.
ಮುಂಬೈನಲ್ಲಿ ಜನರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವಂತೆ ಮರಾಠಾ ಹೋರಾಟಗಾರರಿಗೆ ಜರಾಂಗೆ ಸಲಹೆ ನೀಡಿದರು. ಅಲ್ಲದೇ ಆಗಸ್ಟ್ 29ರಿಂದ ಇಲ್ಲಿಯವರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಮೂವರು ಬೆಂಬಲಿಗರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.